ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರಾಜಗೋಪುರ ಸಮರ್ಪಣೆ
ಕುಂದಾಪುರ ಮಿರರ್ ಸುದ್ದಿ
ಕುಂದಾಪುರ: 40 ವರ್ಷದ ಹಿಂದೆ ಈ ಭಾಗ ಸಾಕಷ್ಟು ಹಿಂದುಳಿತ್ತು. ಇವತ್ತು ತುಂಬಾ ಪ್ರಗತಿ ಸಾಧಿಸಿದೆ. ಭಕ್ತರು ಶ್ರೀಮಂತರಾದಾಗ ದೇವಸ್ಥಾನಗಳು ಅಭಿವೃದ್ದಿ ಹೊಂದುತ್ತದೆ. ಅದಕ್ಕೆ ಸಾಕ್ಷಿಯಾಗಿ ಯು.ಬಿ ಶೆಟ್ಟರು ಭಕ್ತಿಯಿಂದ ದುರ್ಗಾಪರಮೇಶ್ವರಿಗೆ ರಾಜಗೋಪುರವನ್ನು ಸಮರ್ಪಿಸಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಯು.ಬಿ ಶೆಟ್ಟಿ ಇವರು ನಿರ್ಮಿಸಿಕೊಟ್ಟಿರುವ ನೂತನ ರಾಜಗೋಪುರವನ್ನು ಉದ್ಘಾಟಿಸಿ, ಆಶಿರ್ವಚನ ನೀಡಿದರು.
ಪ್ರಸಿದ್ಧ ಕ್ಷೇತ್ರಗಳಲ್ಲಿ ಭಕ್ತರು ದೇವರನ್ನು ನೋಡಲು ಅವಕಾಶವಿರುವುದು ಕೆಲವು ಕ್ಷಣಗಳು ಮಾತ್ರವಾದರೂ ದೇವರ ದೃಷ್ಟಿ ಭಕ್ತರ ಮೇಲೆ ಇರುತ್ತದೆ. ಎಲ್ಲ ಕಡೆಯೂ ದೇವರ ದೃಷ್ಟಿ ಸಿಸಿ ಕ್ಯಾಮರದಂತೆ ಇರುತ್ತದೆ. ದೇವರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ದೇವಸ್ಥಾನದಲ್ಲಿ ಸಾನಿಧ್ಯ ಮುಖ್ಯ. ನಿತ್ಯ ಪೂಜೆ, ಅನುಷ್ಟಾನದಿಂದ ಶಕ್ತಿ ಸಂಚಯನವಾಗುತ್ತದೆ. ಆ ಮೂಲಕ ಅನುಗ್ರಹಕಾರಕ ಶಕ್ತಿ ಉಂಟಾಗುತ್ತದೆ. ದೇವಸ್ಥಾನಗಳು ದೋಷ ನಿವಾರಣ ಕೇಂದ್ರಗಳು. ದೋಷವನ್ನು ಸ್ವೀಕರಿಸುವ ಶಕ್ತಿ ದೇವಸ್ಥಾನಗಳಿಗೆ ಇದ್ದಾಗ ಅನುಗ್ರಹವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಹಿಸಿ, ಯು.ಬಿ ಶೆಟ್ಟರ ಈ ಕೊಡುಗೆ ಶಾಶ್ವತವಾಗಿ ಉಳಿಯುತ್ತದೆ. ಈ ದೇವಸ್ಥಾನದ ಅಭಿವೃದ್ದಿಗೆ ಇನ್ನೂ ದಾನಿಗಳು ಮುಂದೆ ಬಂದಿದ್ದು, ಶೀಘ್ರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲಾಗುವುದು ಎಂದರು.
ಮಾಜಿ ಸಭಾಪತಿ, ವಿಧಾನಪರಿಷತ್ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಲಿ.,ಉಪ್ಪುಂದ ಇದರ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ದೇವಸ್ಥಾನದ ಆಡಳಿತಾಧಿಕಾರಿ ಶೋಭಾಲಕ್ಷ್ಮೀ ಎಚ್.ಎಸ್., ಯು.ಸೀತಾರಾಮ ಶೆಟ್ಟಿ, ರಂಜನಾ ಯು.ಬಿ. ಶೆಟ್ಟಿ ಉಪಸ್ಥಿತರಿದ್ದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಯುಬಿ ಶೆಟ್ಟಿ ದಂಪತಿಗಳು, ಮಕ್ಕಳು, ಅಳಿಯ ಗೌರವಿಸಿದರು. ಈ ಸಂದರ್ಭದಲ್ಲಿ ರಾಜ ಗೋಪುರ ಶಿಲ್ಪಿ ಶ್ರೀಧರ ಮೂರ್ತಿ ಶಿಕಾರಿಪುರ, ಪ್ರಧಾನ ಅರ್ಚಕರಾದ ಪ್ರಕಾಶ ಉಡುಪ ಅವರನ್ನು ಸನ್ಮಾನಿಸಲಾಯಿತು. ಗೋಪುರ ಕೊಡುಗೆಯ ದಾನಿಗಳಾದ ಯು.ಬಿ ಶೆಟ್ಟಿ, ರಂಜನಾ ಯು.ಬಿ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಗಾಯಕಿ ನಂದಿನಿ ರಾವ್ ಗುಜರ್ ಪ್ರಾರ್ಥನೆ ಮಾಡಿದರು. ಶ್ರೀ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಉಪ್ಪುಂದ ಇದರ ಸಹ ಮುಖ್ಯೋಪಾಧ್ಯಾಯಿನಿ ರಂಜಿತಾ ಹೆಗಡೆ ಸ್ವಾಗತಿಸಿದರು. ಯು.ಬಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮದನ್ ಕುಮಾರ್ ಉಪ್ಪುಂದ ವಂದಿಸಿದರು. ಆರ್.ಜೆ ನಯನ ಮತ್ತು ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.