ಭಗವಂತನ ನಾಮ ಸ್ಮರಣೆಯೇ ನಿಜವಾದ ಭಕ್ತಿಯ ಪ್ರತೀಕ – ಈಶಪ್ರೀಯ ತೀರ್ಥ ಸ್ವಾಮೀಜಿ

0
519

ಕುಂದಾಪುರ ಮಿರರ್ ಸುದ್ದಿ

ಕುಂದಾಪುರ : ಭಗವಂತನ ನಾಮ ಸ್ಮರಣೆಯೇ ನಿಜವಾದ ಭಕ್ತಿಯ ಪ್ರತೀಕವಾಗಿದೆ. ಪ್ರತಿ ಕ್ಷಣವೂ ನಾವು ಮಾಡುವ ಭಗವಾನ್ ಸ್ಮರಣೆಗಳು ನಮ್ಮನ್ನು ಭಗವಂತನ ಸಾನಿಧ್ಯವನ್ನು ಕ್ಷಿಪ್ರವನ್ನಾಗಿ ತಲುಪುವಂತೆ ಮಾಡುವುದರ ಜೊತೆಯಲ್ಲಿ ಅವನ ಆಶೀರ್ವಾದವೂ ದೊರಕುತ್ತದೆ ಎಂದು ಅದಮಾರು ಮಠದ ಈಶಪ್ರೀಯ ತೀರ್ಥ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಕೊಡ್ಲಾಡಿಯ ಗುಡ್ಡೆ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಪ್ರತಿ ಜೀವ ಸಂಕುಲಗಳೂ ಕಷ್ಟದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಇಹ ಹಾಗೂ ಪೂರ್ವ ಜನ್ಮದ ಕರ್ಮ ಫಲವಾದ ಕಷ್ಟ ಪರಿಹಾರಕ್ಕಾಗಿ ಮಾತ್ರ ಭಗವಂತನ ಬಳಿಗೆ ಹೋಗೋದರಲ್ಲಿಯೂ ಅರ್ಥ ಇಲ್ಲ. ಸೃಷ್ಟಿಕರ್ತನಾದ ಭಗವಂತನಿಗೆ ಕೃತಜ್ಞತೆ ಸಲ್ಲಿಸಲು ದೇವಾಲಯಕ್ಕೆ ಹೋಗುವುದೆ ನಿಜ ಅರ್ಥದ ಪೂಜೆಯಾಗುತ್ತದೆ. ಎಲ್ಲೆಡೆ ಇರುವ ಭಗವಂತನನ್ನು ಒಂದೆಡೆ ಕಾಣಬೇಕು ಎನ್ನುವ ಸಂಕಲ್ಪದ ಪುಣ್ಯ ಸ್ಥಳ ದೇವಾಲಯವಾಗಿದೆ. ಪೂಜೆ, ಉಪಾಸನೆ ಹಾಗೂ ಭಕ್ತಿಯ ಮೂಲಕ ದೇವರು ಬಿಂಬದಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಬಿಂಬವೇ ದೇವರಲ್ಲ. ಭಗವಂತನ ಚಿಂತನೆಯಿಂದ ಬದುಕು ಸಾರ್ಥಕವಾಗುತ್ತದೆ. ಧರ್ಮ ಹಾಗೂ ದೇವಾಲಯಗಳು ಉಳಿದು-ಬೆಳೆಯುವುದರಿಂದ ನಮ್ಮ ಸಂಸ್ಕೃತಿಯೂ ಬೆಳೆಯುತ್ತದೆ. ಬೇರೆ ಧರ್ಮದ ಕಡೆ ಹೋಗುವುದರಿಂದ ಕಷ್ಟ ಪರಿಹಾರವಾಗುತ್ತದೆ ಎನ್ನುವುದು ಕ್ಷಣಿಕ ಹಾಗೂ ಭ್ರಮೆ ಎಂದು ಅವರು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ಜ್ಯೋತಿಷಿ ವಾಸುದೇವ ಭಟ್ ತಟ್ಟವಟ್ಟು ಅವರು, ಇಲ್ಲಿನ ಪ್ರೇಕ್ಷಣಿಯ ಸ್ಥಳಗಳು, ವ್ಯವಹಾರೋದ್ಯಮಗಳಿಂದ ಭಾರತ ವಿಶ್ವ ಮನ್ನಣೆಯನ್ನು ಗಳಿಸಿಲ್ಲ. ಇಲ್ಲಿನ ಅವಿನಾಶಿನಿ, ಸನಾತನ ಪರಂಪರೆ ಹಾಗೂ ಭವ್ಯ ಸಂಸ್ಕೃತಿಗಳು ಭಾರತವನ್ನು ವಿಶ್ವ ಗುರುವನ್ನಾಗಿಸಿದೆ. ಬೇರೆ ಧರ್ಮಗಳು ಯಂತ್ರ ಮಾನವನ ನೆರವಿನಿಂದ ಬದಕನ್ನು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದರೇ, ಹಿಂದೂ ಧರ್ಮ ದೇವ ಮಾನವರನ್ನೆ ಸೃಷ್ಟಿಸುತ್ತದೆ. ಶಾಸ್ತ್ರ ಹಾಗೂ ಜ್ಞಾನದ ಕೊರತೆ ನಮ್ಮ ಅಧೋಗತಿಗೆ ಕಾರಣವಾಗುತ್ತದೆ. ದೇವರು ಒಬ್ಬನೇ ಅದರೂ, ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಶಕ್ತಿಗಳಿಗೆ ಪರಿಬೇಧಗಳಿಲ್ಲ. ಪ್ರತಿ ಸೇವೆಯೂ ರಾಷ್ಟ್ರಕ್ಕೆ ಅರ್ಪಿತವಾಗುತ್ತದೆ ಎನ್ನುವ ಮನೋಭೂಮಿಕೆ ಬಲಯುತವಾಗಬೇಕು. ಜೀರ್ಣೋದ್ಧಾರದಿಂದ ದೇವರ ಅನುಭೂತಿ ದೊರಕುತ್ತದೆ. ಅಪಪ್ರಚಾರಗಳು ಪರೋಕ್ಷವಾಗಿ ಮತಾಂತರ ಆಕರ್ಷಣೆಗೂ ಕಾರಣವಾಗುತ್ತದೆ. ಈ ಕುರಿತು ಎಚ್ಚರಿಕೆ ಅಗತ್ಯ ಎಂದು ಕಿವಿಮಾತು ಹೇಳಿದರು.

Click Here

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ನೂತನ ದೇವಸ್ಥಾನದ ಲೋಕಾರ್ಪಣೆ ಮಾಡಿದರು. ಆಡಳಿತ ಧರ್ಮದರ್ಶಿ ಬಾಂಡ್ಯಾ ಸುಬ್ಬಣ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಅಧ್ಯಕ್ಷ ಎಂ.ಆನಂದ ಶೆಟ್ಟಿ ಕೊಡ್ಲಾಡಿ ಇದ್ದರು.

ಧಾರ್ಮಿಕ ಕಾರ್ಯಕ್ರಮದ ನೇತ್ರತ್ವದ ವಹಿಸಿದ್ದ ಉದಯ ಅಡಿಗ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ನಿರ್ಮಾಣಕ್ಕೆ ಧನ ಸಹಾಯವನ್ನು ನೀಡಿದ ಮಹನೀಯರನ್ನು ಹಾಗೂ ಶಿಲ್ಪಿ ವಿಜಯ್ ಬಸ್ರೂರು ಅವರನ್ನು ದೇಗುಲದ ವತಿಯಿಂದ ಗೌರವಿಸಲಾಯಿತು. ಕುಂಭ ಕಲಶಾಭಿಷೇಕ, ಮಹಾ ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಪತ್ರಕರ್ತ ರಾಜೇಶ್ ಕೆ.ಸಿ ಕುಂದಾಪುರ ಪ್ರಾಸ್ತಾವಿಕ ಮಾತನಾಡಿದರು, ಗುರುಕುಲ ಪಬ್ಲಿಕ್ ಸ್ಕೂಲ್‌ ವಕ್ವಾಡಿಯ ಶಿಕ್ಷಕರಾದ ರಾಘವೇಂದ್ರ ಅಮ್ಮುಂಜೆ ಹಾಗೂ ವಿಜಯಲಕ್ಷ್ಮೀ ನಿರೂಪಿಸಿದರು, ವೆಂಕಪ್ಪ ನಾಯ್ಕ್ ವಂದಿಸಿದರು.

ಪುರಾತನ ಇತಿಹಾಸ ಇರುವ ಗುಡ್ಡದ ಮೇಲೆ ನೆಲೆ ನಿಂತಿರುವ ಕೊಡ್ಲಾಡಿ ಗುಡ್ಡೆ ಮಹಾಗಣಪತಿ ದೇವಸ್ಥಾನ ನೋಡುಗರನ್ನು ತನ್ನಡೆಗೆ ಸೆಳೆಯುತ್ತಿದೆ. ಈ ಪುಣ್ಯ ಕ್ಷೇತ್ರದ ಅಭಿವೃಧ್ಧಿಗಾಗಿ ಸರ್ಕಾರದಿಂದ ದೊರಕುವ ನೆರವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. – ಬಿ.ಎಂ.ಸುಕುಮಾರ ಶೆಟ್ಟಿ. ಶಾಸಕರು, ಬೈಂದೂರು.

Click Here

LEAVE A REPLY

Please enter your comment!
Please enter your name here