ಅಗಲಿದ ಎಜಿ ಕೊಡ್ಗಿಯವರಿಗೆ ಗಣ್ಯರು, ಸಹಸ್ರಾರು ಜನರಿಂದ ಅಶ್ರುತರ್ಪಣ, ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ವಿದಾಯ(Video)

0
1828

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಅನಾರೋಗ್ಯದ ಹಿನ್ನೆಲೆ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ತಾಲ್ಲೂಕಿನ ಅಮಾಸೆಬೈಲಿನ ಮೃತರ ಸ್ವಗ್ರಹದ ಸಮೀಪದ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಿತು.

Video:

ಸೋಮವಾರ ರಾತ್ರಿ ಮೃತದೇಹವನ್ನು ಅಮಾಸೆಬೈಲಿನಲ್ಲಿರುವ ಅವರ ಮನೆಗೆ ತರಲಾಗಿದ್ದು, ಮಂಗಳವಾರ ಬೆಳಿಗ್ಗೆ ಮನೆಯ ಸಮೀಪದ ಗೋಕುಲ್ ಗೇರು ಕಾರ್ಖಾನೆಯ ಆವರಣದೊಳಗೆ ಮೃತ ದೇಹವನ್ನು ಇರಿಸಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಎಜಿ ಕೊಡ್ಗಿಯವರ ಅಭಿಮಾನಿಗಳು ಹಾಗೂ ಕುಟುಂಬಿಕರು ಸಾವಿರಾರು ಸಂಖ್ಯೆಯಲ್ಲಿ ದರ್ಶನ ಪಡೆದುಕೊಂಡು ಅಂತಿಮ ನಮನಗಳನ್ನು ಸಲ್ಲಿಸಿದರು.

ಸರ್ಕಾರಿ ಗೌರವ:
ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಸರ್ಕಾರದ ವತಿಯಿಂದ ಗೌರವ ರಕ್ಷೆ ನೀಡಲಾಯಿತು. ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಗಾಳಿಯಲ್ಲಿ 3 ಬಾರಿ ಕುಶಾಲು ತೋಪುಗಳನ್ನು ಸಿಡಿಸಿ ಗೌರವ ರಕ್ಷೆ ನೀಡಲಾಯಿತು. ಮೃತ ದೇಹಕ್ಕೆ ಹೊದಿಸಲಾದ ತ್ರಿವರ್ಣ ಧ್ವಜವನ್ನು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಗ್ರೃಹ ಸಚಿವ ಅರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‍ಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರಣಿಕ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಜಿಲ್ಲಾ ಎಸ್.ಪಿ ಎನ್.ವಿಷ್ಣುವರ್ಧನ್ ಇದ್ದರು. ಮಧ್ಯಾಹ್ನದ ಬಳಿಕ ಮೃತ ದೇಹವನ್ನು ಮರಳಿ ಮೂಲ ಮನೆಗೆ ತೆಗೆದುಕೊಂಡು ಹೋಗಿ, ಕುಟುಂಬದ ಪುರೋಹಿತರ ಮಾರ್ಗದರ್ಶನದಲ್ಲಿ ಅಂತ್ಯವಿಧಿಗಳನ್ನು ನೆರವೇರಿಸಲಾಯಿತು. ಬಳಿಕ ಮನೆಯ ಸಮೀಪದ ತೋಟದಲ್ಲಿ ನಿರ್ಮಿಸಲಾದ ಚಿತೆಯಲ್ಲಿ ಹಿಂದೂ ಬ್ರಾಹ್ಮಣ ಪದ್ಧತಿಯಂತೆ ಅಗ್ನಿಸ್ವರ್ಶ ಮಾಡಿ ಅಂತ್ಯಕ್ರಿಯೆ ನಡೆಸಲಾಯಿತು.

ಮಕ್ಕಳಾದ ಅಶೋಕಕುಮಾರ ಕೊಡ್ಗಿ, ಕಿಶೋರಕುಮಾರ ಕೊಡ್ಗಿ( ಕ್ಯಾಂಪ್ಕೋ ಅಧ್ಯಕ್ಷ ), ಆನಂದ ಕೊಡ್ಗಿ, ಕುಮಾರ ಕೊಡ್ಗಿ, ಕಿರಣಕುಮಾರ ಕೊಡ್ಗಿ ( ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ) , ಪುತ್ರಿ ಶಶಿ, ಸಹೋದರ ಅನಂತಕೃಷ್ಣ ಕೊಡ್ಗಿ ಹಾಗೂ ಕುಟುಂಬಿಕರು ಪಾಲ್ಗೊಂಡಿದ್ದರು.

ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ
ಎಜಿ ಕೊಡ್ಗಿ ಅವರು ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದು, ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ ಎಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದರು.

Click Here

Click Here

ಶಾಸಕರಾಗಿ ಈ ಭಾಗದ ಜನರಿಗೆ ಸೇವೆ ನೀಡಿದ್ದಾರೆ. ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಸ್ಮರಣೀಯ ಕೆಲಸ ಮಾಡಿದ್ದು, ಅವರ ಮಾರ್ಗದರ್ಶನದಲ್ಲೇ ಪಂಚಾಯತ್ ರಾಜ್ ವ್ಯವಸ್ಥೆ ಸರಿಪಡಿಸಲು ಅನುಕೂಲವಾಗಿದೆ. ಬೊಮ್ಮಾಯಿ ಸರಕಾರ ಕೊಡ್ಗಿ ಅವರ ಕೊಡುಗೆಗಳನ್ನು ಗೌರವಿಸಿ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸುತ್ತಿದೆ. ಸರಕಾರದ ಪರವಾಗಿ ಅಂತಿಮ ನಮನ ಸಲ್ಲಿಸಲು ನಾನು ಬಂದಿದ್ದೇನೆ ಎಂದರು.

ತೀರ್ಥಹಳ್ಳಿಗೂ ಎಜಿ ಕೊಡ್ಗಿಯವರಿಗೂ ಅವಿನಾಭಾವ ಸಂಬಂಧವಿದೆ. ಕೊಡ್ಗಿ ಅವರ ಸಹೋದರಿ ತೀರ್ಥಹಳ್ಳಿಯಲ್ಲಿ ವಾಸವಿದ್ದ ಕಾರಣ ಕೊಡ್ಗಿಯವರು ಆಗಾಗ್ಗೆ ತೀರ್ಥಹಳ್ಳಿಗೆ ಬರುತ್ತಿದ್ದರು. ಈ ಕಾರಣದಿಂದಲೇ ಹಲವು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಕೊಡಿಯವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ
ತಮ್ಮ ನೇರ ನಡೆ-ನುಡಿಗಳಿಂದಲೇ ಪಕ್ಷಾತೀತವಾಗಿ ಗುರುತಿಸಿಕೊಂಡಿದ್ದ ಎಜಿ ಕೊಡ್ಗಿಯವರು ಆಸ್ಕರ್ ಫೆರ್ನಾಂಡೀಸ್, ವಿಎಸ್ ಆಚಾರ್ಯರಂತೆಯೇ ಜಿಲ್ಲೆಯ ಆಸ್ತಿಯಾಗಿದ್ದರು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಎಜಿ ಕೊಡ್ಗಿಯವರು ಅನೇಕ ವಿಚಾರಧಾರೆಗಳನ್ನು ಬಿಟ್ಟು ನಮ್ಮನ್ನೆಲ್ಲ ಅಗಲಿದ್ದಾರೆ. ನುಡಿದಂತೆ ನಡೆಯುವ ವ್ಯಕ್ತಿತ್ವ ಅವರದ್ದು. ಜನಸಾಮಾನ್ಯರ ಬಗ್ಗೆ ಅತೀವ ಕಾಳಜಿ ಹಾಗೂ ಜನಸಾಮಾನ್ಯರ ಧ್ವನಿಯನ್ನು ಎಲ್ಲಿಗೆ ಮುಟ್ಟಿಸಬೇಕೊ ಅಲ್ಲಿಗೆ ಮುಟ್ಟಿಸುವಂತಹ ಶಕ್ತಿ ಅವರಲ್ಲಿತ್ತು. ಜೀವನದೂದ್ದಕ್ಕೂ ಅನೇಕ ಮೌಲ್ಯಗಳನ್ನು ಅಳವಡಿಸಿಕೊಂಡ ಅವರ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದೇ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜಕೀಯಕ್ಕೆ ಅಪವಾದ ಎನ್ನುವ ರೀತಿಯಲ್ಲಿ ಬದುಕಿದ ನಾಯಕ. ಎಜಿ ಕೊಡ್ಗಿಯವರಂತಹ ಮೇರು ವ್ಯಕ್ತಿತ್ವದ ನಾಯಕನನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಸಂಸದ ಬಿವೈ ರಾಘವೇಂದ್ರ
ಮಾಜಿ ಶಾಸಕ ಎಜಿ ಕೊಡ್ಗಿಯವರ ಸಾವು ನಮಗೆಲ್ಲರಿಗೂ ತುಂಬಲಾರದ ನಷ್ಟವಾಗಿದ್ದು ರಾಜಕೀಯವು ಸೇವೆ ಎಂಬ ಅರ್ಥಕ್ಕೆ ಶಕ್ತಿ ತುಂಬಿದ ಧೀಮಂತ ನಾಯಕ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿವೈ ರಾಘವೇಂದ್ರ ಹೇಳಿದರು.

ಕೊಡ್ಗಿಯವರು ಕೊನೆಯುಸಿರಿನ ತನಕವೂ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದು, ಕುಗ್ರಾಮವಾದ ಅಮಾಸೆಬೈಲ್ ಅನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಅವರಿಗಿದೆ. ರಾಷ್ಟ್ರೀಕೃತ ಬ್ಯಾಂಕ್ ಸಹಕಾರದಿಂದ ಸೋಲಾರ್ ಅಳವಡಿಸಿ ಇಡೀ ಊರಿಗೆ ಬೆಳಕು ಚೆಲ್ಲಿದವರು. ರಾಜಕೀಯ, ಸಾಮಾಜಿಕ, ಸಹಕಾರಿ, ಕೃಷಿ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಿದ್ದ ಅವರು ಸರಳತೆ, ಶಿಸ್ತಿನಿಂದಲೇ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ನಾನು ಸಂಸತ್ ಸದಸ್ಯನಾಗಿ ಜನರ ಧ್ವನಿಯಾಗಿ ಕೆಲಸ ಮಾಡಲು ಎಜಿ ಕೊಡ್ಗಿಯವರ ಆಶೀರ್ವಾದ ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ
ಕರಾವಳಿಯಲ್ಲಿ ಭಾಜಪವನ್ನು ಕಟ್ಟಿ ಬೆಳೆಸುವಲ್ಲಿ ಎಜಿ ಕೊಡ್ಗಿಯವರ ಪಾತರ್ರ ಬಹಳ ಮುಖ್ಯವಾಗಿದೆ. ಜನಪರವಾದ ಅನೇಕ ಯೋಜನೆಗಳನ್ನು ರೂಪಿಸುವಲ್ಲಿ ಕೊನೆತನಕವೂ ಶ್ರಮಿಸಿದ್ದಾರೆ. ಅವರೊಬ್ಬ ಅಭಿವೃದ್ದಿಯ ಕನಸುಗಾರರು ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕರಾವಳಿಗೆ ನೀರಿನ ಸೌಲಭ್ಯಕ್ಕಾಗಿ ದಶಕಗಳಿಂದ ಹೋರಾಟ ಮಾಡಿದ ಎಜಿ ಕೊಡ್ಗಿಯವರು ಸೌಭಾಗ್ಯ ಸಂಜೀವಿನಿ ಯೋಜನೆ ಯೋಜನೆಯ ಕನಸು ಕಂಡವರು. ಹಾಲಾಡಿಯವರನ್ನು ಚುನಾವಣೆಗೆ ನಿಲ್ಲಿಸುವಲ್ಲಿ ಕೊಡ್ಗಿಯವರ ಪಾತ್ರ ದೊಡ್ಡದಾಗಿದೆ. ನಾನು ರಾಜಕೀಯ ಪ್ರಾರಂಭ ಮಾಡಿದ್ದು ಎಜಿ ಕೊಡ್ಗಿಯವರ ನಾಯಕತ್ವದಲ್ಲಿ. ಸಂಘ ಹಾಗೂ ಭಾರತೀಯ ಕಿಸಾನ್ ಸಂಘದಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಸಂಘದಲ್ಲಿ ಈ ಪದ್ದತಿ ಇಲ್ಲ ಎಂದರೂ ಆ ಸಂದರ್ಭದಲ್ಲಿ ಅವರು ಕೇಳಿರಲಿಲ್ಲ. ಮಣಿಪಾಲದಲ್ಲಿ ಉದ್ಯೋಗದಲ್ಲಿರುವ ಸಂದರ್ಭದಲ್ಲಿ ಈ ಜವಾಬ್ದಾರಿ ಘೋಷಣೆ ಮಾಡಿದರು. ನನಗೆ ಬಿಜೆಪಿಯ ಮೊದಲ ಜವಾಬ್ದಾರಿ ಘೋಷಣೆ ಮಾಡಿದವರು ಕೊಡ್ಗಿಯವರು ಎಂದರು.

ಕೊಡ್ಗಿಯವರು ಕರೆ ಮಾಡಿದರು ಎಂದರೆ ಬೈತಾರೆ ಅಂತಲೇ ಲೆಕ್ಕ. ಅಭಿವೃದ್ದಿ ಕೆಲಸಗಳ ಸಲುವಾಗಿ ಅವರಿಗೆ ಸಾಕಷ್ಟು ಕಾಳಜಿ ಇತ್ತು ಈ ಕಾರಣಕ್ಕಾಗಿಯೇ ಅವರ ಜೊತೆ ಸಾಕಷ್ಟು ಬಾರಿ ಬೈಸಿಕೊಂಡಿದ್ದೇನೆ. ಶಾಸಕರಾಗಿ ಹಲವು ಹುದ್ದೆಗಳನ್ನು ಏರಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ ಅವರಿಗೆ

ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕೆನ್ನುವ ವಿಶೇಷವಾದ ಕಾಳಜಿ ಇತ್ತು. ಕೊಡ್ಗಿಯವರು ಭೇಟಿಯಾಗುತ್ತಾರೆಂದರೆ ಮುಖ್ಯಮಂತ್ರಿಗಳು ಕೂಡ ಕನಿಷ್ಠ ಒಂದು ಗಂಟೆ ಸಮಯ ಮೀಸಲಿಡುತ್ತಿದ್ದರು. \ ತೊಂಭತ್ತನಾಲ್ಕರ ವಯಸ್ಸಲ್ಲೂ ಅವರ ಉತ್ಸಾಹ ಕುಗ್ಗಿರಲಿಲ್ಲ. ಇಂತಹ ಮೇರು ವ್ಯಕ್ತಿತ್ವದ ನಾಯಕ ಇಂದು ನಮ್ಮೊಂದಿಗಿಲ್ಲದಿರುವುದು ನೋವಿನ ವಿಚಾರ. ಅವರ ಮಾತಲ್ಲಿ ಪ್ರೀತಿ ಇರುತಿತ್ತು, ಚೆನ್ನಾಗಿ ಕೆಲಸ ಮಾಡಬೇಕೆನ್ನುವ ಕಾಳಜಿ ಇತ್ತು ಖಂಡಿತ ಅವರ ಭಾವನೆಯಂತೆ ಮುಂದೆ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವೆ ತೊಂಭತ್ತನಾಲ್ಕು ಎಂದರೆ ಚಿಕ್ಕ ವಯಸ್ಸಲ್ಲ, ತುಂಬು ಜೀವನವನ್ನು ನಡೆಸಿದ್ದಾರೆ ಎಂದರು.

Click Here

LEAVE A REPLY

Please enter your comment!
Please enter your name here