ಬೀಜಾಡಿ :ಶಾಲಾ ಆವರಣ ಜಾಗ ಶಾಲೆಗೇ ಮೀಸಲಾಗಿರಿಸುವಂತೆ ಗ್ರಾಮಸ್ಥರ ಒತ್ತಾಯ

0
553

ಬೀಜಾಡಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಜನರ ಸಮಸ್ಯೆಗಳನ್ನು ಇಲಾಖೆ ಜನರ ಬಳಿಗೇ ಬಂದು ಪರಿಹರಿಸುವ ಕಾರ್ಯಕ್ರಮ ಇದಾಗಿದೆ. ಸ್ಥಳದಲ್ಲಿ ಪರಿಹಾರವಾಗದ ಸಮಸ್ಯೆಗಳು ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಇಲಾಖಾಧಿಕಾರಿಗಳ ಮೂಲಕ ಇತ್ಯರ್ಥಗೊಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಮನವಿಗಳಿಗೆ ವಿಶೇಷ ಆದ್ಯತೆ ಅಡಿಯಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಎಂದು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು.

ಬೀಜಾಡಿಯ ಮಿತ್ರಸಂಗಮ ಸಭಾ ಭವನದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

Click Here

Click Here

ತಿಂಗಳ ಮೂರನೇ ವಾರ ಈ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲೆಯಲ್ಲಿ 7 ತಾಲೂಕುಗಳಿದ್ದು ತಾಲೂಕಿನ ಒಂದು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಬೀಜಾಡಿಯ ಕರಾವಳಿ ಸರ್ಕಾರಿ ಶಾಲೆ ದಾನಿಗಳ, ವಿದ್ಯಾಭಿಮಾನಿಗಳ ಸಹಬಾಗಿತ್ವದಲ್ಲಿ ಉತ್ತಮವಾಗಿ ನಡೆಯುತ್ತಿದ್ದು, 65 ವರ್ಷಗಳ ಇತಿಹಾಸ ಈ ಶಾಲೆಗೆ ಇದೆ. ಶಾಲೆಗೆ ಸಂಬಂಧಪಟ್ಟಂತೆ 56 ಸೆಂಟ್ಸ್ ಇದ್ದು ಅದಕ್ಕೆ ಆವರಣಗೋಡೆ ನಿರ್ಮಿಸಲಾಗಿದ್ದು, ಈಗ ಈ ಸ್ಥಳದಲ್ಲಿ ಶಿಕ್ಷಣಕ್ಕೆ ಸಂಬಂಧಪಡದ ಅಭಿವೃದ್ದಿ ಕಾಮಗಾರಿಗೆ ಮುಂದಾಗಿರುವುದು ಶಿಕ್ಷಣವಿರೋಧಿ ಧೋರಣೆಯಾಗಿದ್ದು, ಈ ಭಾಗದಲ್ಲಿ ಸಾಕಷ್ಟು ಸರ್ಕಾರಿ ಸ್ಥಳವಿದ್ದು, ಶಾಲೆಯ ಸ್ಥಳದ ಮೇಲೇ ಕಣ್ಣು ಹಾಕಿರುವುದು ಖಂಡನಾರ್ಹ. ಭವಿಷ್ಯದ ದೃಷ್ಟಿಯಿಂದ ಈ ಸ್ಥಳ ಶಾಲೆಗೇ ಮೀಸಲಿರಬೇಕು ಎಂದು ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ಹೇಳಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಎ.ಸಿ., ಡಿ.ಸಿ ಅವರ ನೇತೃತ್ವದಲ್ಲಿ ಪ್ರಕರಣವನ್ನು ಇತ್ಯಾರ್ಥ ಮಾಡಲಾಗುವುದು ಎಂದರು.

ಅಷ್ಟಕ್ಕೆ ತೃಪ್ತರಾಗದ ಬಾಬಣ್ಣ ಪೂಜಾರಿ ಶಾಲೆಯ ಅಸ್ತಿತ್ವಕ್ಕಾಗಿ ನಿಮ್ಮ ಕಾಲು ಬೇಕಾದರೂ ಹಿಡಿಯುತ್ತೇನೆ. ಈ ಸ್ಥಳವನ್ನು ಶಾಲೆಗಾಗಿಯೇ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಮಾತನಾಡಿ, ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಬೇರೆ ಬೇರೆ ಭಾಗದ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಶಾಲಾ ಆವರಣದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಮುಂದಾಗಿರುವುದು ಸರಿಯಲ್ಲ. ಇದೇ ಮುಂದುವರಿದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ನೆರೆದ ವಿದ್ಯಾಭಿಮಾನಿಗಳು ಯಾವುದೇ ಕಾರಣಕ್ಕೂ ಶಾಲಾ ಜಾಗಕ್ಕೆ ತೊಂದರೆ ಮಾಡಬಾರದು. ಶಾಲಾ ಜಾಗಕ್ಕೆ ಧಕ್ಕೆಯಾದರೂ ಶಿಕ್ಷಣಾಭಿಮಾನಿಗಳು ಸುಮ್ಮನೆ ಬಿಡುವುದಿಲ್ಲ ಎಂದರು.

ಅನಾದಿ ಕಾಲದ ಕಾಲುದಾರಿಯನ್ನು ವ್ಯಕ್ತಿಯೊಬ್ಬರು ತಡೆವೊಡ್ಡಿದ್ದು ಅದನ್ನು ನೆಡೆದಾಡಲು ಮುಕ್ತಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಕಾರ್ಯಕ್ರಮ ಉದ್ಘಾಟಿಸಿದರು. ಡಿವೈಎಸ್‍ಪಿ ಶ್ರೀಕಾಂತ್ ಕೆ., ಅಬಕಾರಿ ಇಲಾಖೆಯ ನಿತ್ಯಾನಂದ, ಕೃಷಿ ಇಲಾಖೆಯ ಪರಶುರಾಮ ಎಂ., ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಾಬಣ್ಣ ಪೂಜಾರಿ, ಮೀನುಗಾರಿಕಾ ಇಲಾಖೆಯ ಮೇಲ್ವಿಚಾರಕ ಜೆ.ಎಂ.ವಿಶ್ವನಾಥಯ್ಯ, ಉಪ ವಲಯ ಅರಣ್ಯ ಅಧಿಕಾರಿ ಉದಯ ಬಿ., ಶಿಶು ಅಭಿವೃದ್ದಿ ಯೋಜನೆ ಮೇಲ್ವಿಚಾರಕಿ ಬಿ.ಪ್ರಭಾವತಿ ಶೆಟ್ಟಿ, ಬಿಸಿಎಂ ಇಲಾಖೆಯ ಕೆ.ಸಂಜೀವ, ಸರ್ವೇ ಇಲಾಖೆಯ ಸುಬ್ರಹ್ಮಣ್ಯ ಎನ್., ರಾಜೇಶ್ ಕೆ.ಸಿ., ರಮೇಶ ಕುಮಾರ್ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here