ಕುಂದಾಪುರ ಮಿರರ್ ಸುದ್ದಿ…
ಕುಂದನಾಡು ರೈತ ಉತ್ಪಾದಕರ ಕಂಪೆನಿ(ರಿ.) ಉದ್ಘಾಟನೆ
ಕುಂದಾಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವಿನೊಂದಿಗೆ ಕೃಷಿ, ತೋಟಗಾರಿಕೆ, ಜಲಾನಯನ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇವರ ಸಹಕಾರದಲ್ಲಿ ಆರಂಭಗೊಂಡ ವಂಡ್ಸೆ ಹೋಬಳಿಯ ಕುಂದನಾಡು ರೈತ ಉತ್ಪಾದಕರ ಕಂಪೆನಿ ಜೂನ್ 19ರಂದು ಅಂಪಾರು ವಿದ್ಯಾದಾಯಿನಿ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕುಂದನಾಡು ರೈತ ಉತ್ಪಾದಕರ ಕಂಪೆನಿ ಉದ್ಘಾಟಿಸಿ, ಕೃಷಿ ವಲಯದಲ್ಲಿ ಇವತ್ತು ಸಾಕಷ್ಟು ಬದಲಾವಣೆಗಳು ಆಗಿವೆ. ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ, ಸವಲತ್ತುಗಳನ್ನು ಒದಗಿಸುವ ಕೆಲಸವೂ ನಡೆಯುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ. ಇವತ್ತು ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ವಿದ್ಯಾರ್ಥಿದಿಸೆಯಿಂದಲೇ ಆಗಬೇಕಾದ ಅನಿವಾರ್ಯತೆಯಿದೆ ಎಂದರು.
ಕುಂದನಾಡು ರೈತ ಉತ್ಪಾದಕ ಕಂಪೆನಿಯ ಷೇರುಪತ್ರವನ್ನು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಿತರಿಸಿದರು.
ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಬಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಉತ್ತೇಜನ ಸಿಗಬೇಕು. ಇವತ್ತು ಸಣ್ಣ ಹಿಡುವಳಿದಾರರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ. ವ್ಯವಸಾಯಗಾರರಿಗಾಗಿ ಆರಂಭವಾದ ಸಹಕಾರ ಕ್ಷೇತ್ರವೂ ಇವತ್ತು ಆ ನಿಟ್ಟಿನಲ್ಲಿ ಸಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕುಂದಾನಾಡು ರೈತ ಉತ್ಪಾದಕರ ಕಂಪೆನಿ ಯಶಸ್ಸು ಗಳಿಸಲಿ ಎಂದರು.
ಇವತ್ತು ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಧಾರಣೆ ಸಿಗುವಂತಾಗಬೇಕು. ಅಂದರೆ ಆ ವಸ್ತುಗಳು ಮೌಲ್ಯವರ್ಧನೆ ಮಾಡಬೇಕು. ತೆಂಗಿನ ಕಾಯಿಗೆ ಇವತ್ತು ಧಾರಣೆ ಕುಸಿದಿದೆ. ಆದರೆ ತೆಂಗಿನ ಎಣ್ಣೆ, ಇತರ ಉತ್ಪನ್ನಗಳ ಧಾರಣೆ ಇಳಿದಿಲ್ಲ. ಹಾಗಾಗಿ ಇಂತಹ ಸಂಸ್ಥೆಗಳು ಶುದ್ಧ ತೆಂಗಿನ ಎಣ್ಣೆ ತಯಾರಿಸುವ ಘಟಕಗಳನ್ನು ಪ್ರಾರಂಭಿಸಿ ರೈತ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ರೈತರ ಉತ್ಪಾದಕರ ಸಂಸ್ಥೆಗಳ ಉತ್ಕøಷ್ಠ ಕೇಂದ್ರ ಬೆಂಗಳೂರು ಇದರ ನಿರ್ದೇಶಕರಾದ ಡಾ.ಅಶೋಕ ಆಲೂರ, ಉಡುಪಿ ಜಿಲ್ಲಾ ಜಂಟೀ ಕೃಷಿ ನಿರ್ದೇಶಕ ಕೆಂಪೇಗೌಡ ಹೆಚ್, ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರಾದ ಶ್ರೀಮತಿ ಭುವನೇಶ್ವರಿ, ಅಟಲ್ ಇನ್ಕ್ಯೊಬೇಷನ್ ಸೆಂಟರ್ ನಿರ್ದೇಶಕರಾದ ಡಾ.ಎ.ಪಿ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿರ್ದೇಶಕರುಗಳಾದ ಶರತ್ ಕುಮಾರ್ ಶೆಟ್ಟಿ ದೇವಲ್ಕುಂದ, ಚಂದ್ರಶೇಖರ ಉಡುಪ ಕೆಂಚನೂರು, ಶರತ್‍ಚಂದ್ರ ಶೆಟ್ಟಿ ಗುಲ್ವಾಡಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ವಿವೇಕ ಭಂಡಾರಿ ಗುಲ್ವಾಡಿ, ಉದಯ ಜಿ.ಪೂಜಾರಿ ಚಿತ್ತೂರು, ಸತೀಶ್ ಶೆಟ್ಟಿ ಹಕ್ಲಾಡಿ, ಗೋವಧರ್ನ ಶೆಟ್ಟಿ ಇಡೂರು, ವಿಜಯ ಶೆಟ್ಟಿ ಮಚ್ಚಟ್ಟು, ಅನುರಾಧ ವಿ ಮಂಜ ಸೇನಾಪುರ, ಮಲ್ಲಿಕಾ ಶೆಟ್ಟಿ ಅಂಪಾರು, ಜ್ಯೋತಿ ಶೆಟ್ಟಿ ಮೂಡುಬಗೆ, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಅಜಿತ್ ಆಚಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ವಂಡ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಉಮೇಶ್ ಶೆಟ್ಟಿ ಶಾನ್ಕಟ್ಟು ವಂದಿಸಿದರು. ಕೀರ್ತನಾ ಉಮೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.