ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮುಂಗಾರು ವೇಗ ಪಡುತ್ತಿದ್ದಂತೆ ಕಡಲ್ಕೊರತವೂ ಆರಂಭವಾಗಿದೆ. ಮರವಂತೆ ಭಾಗದಲ್ಲಿ ಕಡಲ್ಕೊರೆತ ಕಳೆದ ಒಂದು ವಾರದಿಂದ ವ್ಯಾಪಕವಾಗಿದ್ದರೂ ಕೂಡಾ ಸರ್ಕಾರವಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ಇಲಾಖೆಗಳಾಗಲಿ ತುರ್ತು ಸ್ಪಂದನೆ ನೀಡುತ್ತಿಲ್ಲ. ಇದರಿಂದ ಬೇಸತ್ತ ಸ್ಥಳೀಯ ಜನರು ತಾವೇ ಸ್ವಯಂ ಪ್ರೇರಿತವಾಗಿ ಕಡಲ ಕೊರೆತ ತಡೆಗೆ ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದಾರೆ.
ಹೊರಬಂದರು ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳಿಗೆ ದಡಕ್ಕೆ ಅಪ್ಪಳಿಸಿ ಈಗಾಗಲೇ ಸಾಕಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇನ್ನೂ ಮುಂದೆ ಮುಂದೆ ಬರುತ್ತಿದ್ದು ತುರ್ತು ತಡೆಯೊಡ್ಡುವ ಕಾರ್ಯವನ್ನು ಮಾಡದೆ ಇರುವುದರಿಂದ ಸಂಪರ್ಕ ರಸ್ತೆಯೂ ಕೊಚ್ಚಿ ಹೋಗುವ ಅಪಾಯ ಎದುರಾಗಿದೆ.
ಸಂಬಂಧಪಟ್ಟವರು ತಕ್ಷಣ ಸಮರೋಪಾದಿಯಲ್ಲಿ ಕ್ರಮ ಕ್ಯಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಮರಳು ಚೀಲಗಳನ್ನು ಅಡ್ಡ ಹಾಕಿ ಅಲೆಯ ಹೊಡೆತ ತಡೆಯುವ ಪ್ರಯತ್ನ ಮಾಡಿದ್ದಾರೆ. ಅಲೆಗಳು ತೀವ್ರವಾಗಿದ್ದರೂ ಕೂಡಾ ಜೀವದ ಹಂಗು ತೊರೆದು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರತೀವರ್ಷವೂ ಇಲ್ಲಿ ಕಡಲ್ಕೊರತೆ ಸಹಜ ಪ್ರಕ್ರಿಯೆ. ಯಾವುದೇ ಪರಿಹಾರ ಮಾತ್ರ ಇಲ್ಲಿಯ ತನಕ ಸಿಕ್ಕಿಲ್ಲ. ಶಾಶ್ವತ ಪರಿಹಾರ ಮಾತ್ರ ಇನ್ನೂ ದೊರಕಿಲ್ಲ. ಈ ಭಾಗದ ಕಡಲ್ಕೊರೆತ ಸಾರ್ವಜನಿಕರಿಗೆ ನಿತ್ಯ ಆತಂಕದ ವಿಷಯವಾಗಿ ಪರಿಣಮಿಸಿದೆ.