ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹೆಮ್ಮಾಡಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ತೆರವಾದ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಧಾಕರ ಎನ್ ದೇವಾಡಿಗ ಕಟ್ಟು ಹಾಗೂ ಉಪಾಧ್ಯಕ್ಷರಾಗಿ ಶೋಭಾ ಡಿ ಕಾಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರಾಗಿದ್ದ ಯು.ಸತ್ಯನಾರಾಯಣ ಶೇರುಗಾರ್ ಹಾಗೂ ಉಪಾಧ್ಯಕ್ಷರಾಗಿದ್ದ ಶೈನಿ ಕ್ರಾಸ್ತಾ ರಾಜೀನಾಮೆ ಸಲ್ಲಿಸಿದ್ದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸುಧಾಕರ ದೇವಾಡಿಗ ಕಟ್ಟು ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಡಿ ಕಾಂಚನ್ ಸಲ್ಲಿಸಿದ್ದರು. ಸ್ಪರ್ಧೆಯಲ್ಲಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಸುಧಾಕರ್ ಹಾಗೂ ಶೋಭಾ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.
ಒಟ್ಟು 11 ಸದಸ್ಯರ ಬಲಾಬಲದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಎಂಟು ಮಂದಿ ಇದ್ದರೆ, ಉಳಿದಂತೆ ಮೂವರು ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ್ ಹಾಗೂ ಶೋಭಾ ಕಟ್ಟು ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ. ಇದೀಗ ಒಂದೇ ವಾರ್ಡ್ ಗೆ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟ ಒಲಿದು ಬಂದಿರುವುದು ಗಮನಾರ್ಹವಾಗಿದೆ.
ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಚುನಾವಣಾಧಿಕಾರಿಯಾಗಿದ್ದರು. ಈ ವೇಳೆಯಲ್ಲಿ ಪಿಡಿಒ ಮಂಜು ಬಿಲ್ಲವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಗುಡಿಬೆಟ್ಟು, ಹೆಮ್ಮಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣ ರಾವ್, ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ನೇತ್ರಾವತಿ, ರತ್ನ, ಶಕೀಲಾ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.