ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಿಎ /ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಅನೇಕ ರಾಷ್ಟ್ರೀಯ ಮಟ್ಟದ ರ್ಯಾಂಕ್ಗಳನ್ನು ಪಡೆದ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಕುಂದಾಪುರ. ಸಿಎ ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ತನ್ನ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜುಲೈ 15ರಂದು ಕುಂದೇಶ್ವರ ರಸ್ತೆಯ ಸಂಸ್ಥೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿತು.
ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ 2022 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಂಸ್ಥೆಯ ವಿದ್ಯಾರ್ಥಿಗಳಾದ ಸಿಎ ಪ್ರಕಾಶ್ ಶೆಟ್ಟಿ ಮತ್ತು ವಿನಾರ್ಡ್ ಅವರನ್ನು ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿಎ ಪ್ರಕಾಶ್ ಶೆಟ್ಟಿ ಕಠಿಣಪರಿಶ್ರಮ,ಗುರುಗಳ ಮಾರ್ಗದರ್ಶನ,ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಸಿಎ ಪರೀಕ್ಷೆಗಳನ್ನು ವಿದ್ಯಾರ್ಥಿಗಳುಯಾವುದೇ ಆತಂಕವಿಲ್ಲದೆ ಪೂರ್ಣಗೊಳಿಸಬಹುದು ಎಂದರು. ಎಸ್ಎಸ್ಎಲ್ ಸಿ ಅಲ್ಲಿ ಕೇವಲ 70% ಅಂಕ ಮತ್ತು ಪಿಯುಸಿಯಲ್ಲಿ 80% ಅಂಕ ಪಡೆದ ಒಬ್ಬ ಸಾಮಾನ್ಯ ವಿದ್ಯಾರ್ಥಿ. ನಾನು ಇಂದು ಸಿಎ ಪೂರ್ಣಗೊಳಿಸಿದ್ದೇನೆ ಎಂದರೆ ಕಠಿಣ ಪರಿಶ್ರಮ, ತ್ಯಾಗಮನೋಭಾವ ಇರುವ ಯಾವುದೇ ವಿದ್ಯಾರ್ಥಿಗಳು ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಬಹುದು ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಅವರು ಮಾತನಾಡಿ ತಮ್ಮ ವಿದ್ಯಾರ್ಥಿಗಳ ಸಾಧನೆ ಹೆಮ್ಮೆ ತರುವಂತದ್ದು. ಇಂತಹ ಸಾಧಕ ವಿದ್ಯಾರ್ಥಿಗಳು ಸಿಎ/ ಸಿಎಸ್ ಪರೀಕ್ಷೆ ಎದುರಿಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿಜವಾದ ಸ್ಪೂರ್ತಿ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಪ್ರಭ ಅಕಾಡೆಮಿಯ ಇನ್ನೂರಕ್ಕು ಹೆಚ್ಚು ಸಿಎ/ಸಿಎಸ್ ಕೋರ್ಸುಗಳ ವಿವಿಧ ಹಂತದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಅಂಕಿತ ವಿ ಶೆಟ್ಟಿ ಸ್ವಾಗತಿಸಿ ನಿರ್ವಹಿಸಿದರು.