ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಒಂದೆಡೆ ಭೋರ್ಗರೆಯುವ ಸಮುದ್ರ ಇನ್ನೊಂದೆಡೆ ಪಶ್ಚಿಮ ಘಟ್ಟದಿಂದ ಪ್ರಶಾಂತವಾಗಿ ಹರಿಯುವ ನದಿ, ಸುತ್ತಮುತ್ತಲು ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ನಡುವೆ ಮರವಂತೆಯ ಮಹಾರಾಜ ಸ್ವಾಮಿ ವರಾಹ ದೇವಸ್ಥಾನ. ಪ್ರಕೃತಿಯ ವಿಸ್ಮಯಕಾರಿ ಅಂಶಗಳ ನಡುವಿನ ಶ್ರೀ ಕ್ಷೇತ್ರದ ವಿಶೇಷತೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ. ಇದೇ ಜು.28ರಂದು ಕರ್ಕಾಟಕ ಅಮಾವಾಸ್ಯೆ ಜಾತ್ರೆಗೆ ಮರವಂತೆ ಸಜ್ಜಾಗುತ್ತಿದೆ.
Video:
ಕಳೆದ ಎರಡು ವರ್ಷಗಳಿಂದ ಕೊರೋನಾ ಭೀತಿಯಿಂದಾಗಿ ಜಾತ್ರೆ ವೈಭವ-ಸಂಭ್ರಮ ಪಡೆದುಕೊಂಡಿರಲಿಲ್ಲ. ಜನಜಾತ್ರೆಯೂ ಇದ್ದಿರಲಿಲ್ಲ. ಆದರೆ ಈ ವರ್ಷ ಎಲ್ಲವೂ ಸರಿಯಾಗಿದ್ದು ಮರವಂತೆಯಲ್ಲಿ ಮೊದಲಿನಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರೆ ನಡೆಯಲಿದೆ. ಅದಕ್ಕೆ ಬೇಕು ಬೇಕಾದ ಪೂರ್ವ ತಯಾರಿಗಳನ್ನು ಈಗಾಗಲೇ ಮಾಡಿಕೊಳ್ಳಲಾಗುತ್ತಿದ್ದು ಮರವಂತೆ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ.
ಜಾತ್ರೆಯಂದು ಸಾವಿರಾರು ಸಂಖ್ಯೆಯಲ್ಲಿ ದೇಗುಲಕ್ಕೆ ಜಾತ್ರೆಯ ದಿನದಂದು ಬೆಳಗ್ಗಿನ ಜಾವದಿಂದಲ್ಲೇ ಆಗಮಿಸುತ್ತಾರೆ. ಭಕ್ತಾದಿಗಳು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ, ವರಾಹ ದೇವರಿಗೆ, ಗಂಗಾಧರೇಶ್ವರ ದೇವರಿಗೆ ಅಭಿಷೇಕ, ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಾರೆ. ಜಾತ್ರೆಯಂದು ಹಲವಾರು ಸೇವೆಗಳನ್ನು ಸಲ್ಲಿಸುತ್ತಾರೆ.
ಉಡುಪು ಸಂಹಿತೆ:
ಈ ವರ್ಷ ಜಾತ್ರೆಗೆ ಬರುವರು ಭಕ್ತಾದಿಗಳು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾತ್ರೆಗೆ ಬರಬೇಕು ಎನ್ನುವ ನಿಬಂಧನೆಗಳನ್ನು ವಿಧಿಸಲಾಗಿದೆ. ಇದು ಉಡುಪಿ ಜಿಲ್ಲೆಯಲ್ಲಿ ಪ್ರಥಮವಾಗಿ ಅನುಷ್ಠಾನಕ್ಕೆ ಬರುತ್ತಿದೆ. ಸೌಪರ್ಣಿಕ ನದಿಯ ನೀರಿನ ಮಟ್ಟ ಹೆಚ್ಚಿರುವುದರಿಂದ ಮತ್ತು ಸಮುದ್ರದ ಅಲೆಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ದೇವಸ್ತಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸತೀಶ್ ನಾಯಕ್ ಹಾಗೂ ಸರ್ವ ಸದಸ್ಯರು ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಿನಂತಿಸಿದ್ದಾರೆ.
ಜಾತ್ರೆಗೆ ಬರುವವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆಗಳು ನಡೆಯುತ್ತಿದ್ದು, ಅಧ್ಯಕ್ಷರು ಹಾಗೂ ಸಮಿತಿ ಸರ್ವ ಸದಸ್ಯರು ನೇತೃತ್ವದಲ್ಲಿ ವ್ಯವಸ್ಥಿತವಾದ ಬರದ ಸಿದ್ಧತೆ ನಡೆಯುತ್ತಿದೆ. ಅರ್ಚಕ ಉಪಾದಿವಂತರು, ಸಿಬಂದಿ, ಸ್ವಯಂ ಸೇವಕರು ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಅವರಿಗೆ ಸಹಕಾರ ನೀಡುತ್ತಿದ್ದಾರೆ.
ನದಿ ಕಡಲಿನ ನಡುವೆ ದೇವಸ್ಥಾನದ ಪಕ್ಕದಲ್ಲಿ ರಾ. ಹೆದ್ದಾರಿ ಇರುವುದರಿಂದ ವಾಹನ ಮತ್ತು ಜನ ದಟ್ಟಣೆಯನ್ನು ನಿಯಂತ್ರಿಸಲು, ಹಾಗೂ ನದಿ, ಸಮುದ್ರ ಬದಿಯಲ್ಲಿ ಅಪಾಯ ಸಂಭವಿಸುವುದನ್ನು ತಡೆಯಲು ದೊಡ್ಡ ಸಂಖ್ಯೆಯ ಪೊಲೀಸ್ ವ್ಯವಸ್ಥೆ ಜಾತ್ರೆಯುದ್ದಕ್ಕೂ ಕಾರ್ಯನಿರತವಾಗಿರುವುದು ಆವಶ್ಯಕವಾಗಿರುವುದರಿಂದ ಮುಂಜಾಗೃತ ಕ್ರಮ ಕೈಗೊಳ್ಳುತ್ತಿವೆ.
ಒಟ್ಟಾರೆಯಾಗಿ ಜು.28ರಂದು ನಡೆಯುವ ಮರವಂತೆ ಜಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ.