ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಾಸರಗೋಡುವಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಮೂಲಕ ಕಲೆ-ಸಂಸ್ಕೃತಿಯ ಉಳಿವಿಗಾಗಿ ಬೃಹತ್ ಸಾಂಸ್ಕೃತಿಕ ಭವನದ ಕಲ್ಪನೆಯಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ಯಕ್ಷಗಾನದ ಸಮಗ್ರ ದಾಖಲಾತಿ-ಕಲಾ ಪ್ರಕಾರಗಳ ತರಗತಿ ಇತ್ಯಾದಿ ಬೃಹತ್ ಯೋಜನೆ ಸಂಕಲ್ಪಿಸಿ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ಸಮಾಲೋಚನಾ ಸಭೆ ಕುಂದಾಪುರದ ಸ.ಪ.ಪೂ ಕಾಲೇಜಿನ ರೋಟರಿ ಶ್ರೀ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮಾತನಾಡಿ, ಕನ್ನಡ ಸಾಹಿತ್ಯ, ಯಕ್ಷಗಾನಕ್ಕೆ ಅಂದಿನ ದಿನಗಳಲ್ಲಿಯೇ ಸಾಕಷ್ಟು ಕೊಡುಗೆಗಳನ್ನು ನೀಡಿದ ಸಿರಿಬಾಗಿಲು ವೆಂಕಪ್ಪಯ್ಯನವರು ತನ್ನ 48ನೇ ವಯಸ್ಸಿನಲ್ಲಿ ಗತಿಸಿದರು. ಅವರ ಸಾಹಿತ್ಯ ಕೇರಳದ ಕನ್ನಡ ಶಾಲೆಗಳಲ್ಲಿ ಉಪಭಾಷೆಯಾಗಿ ಪಠ್ಯವಾಗಿದೆ. ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಆರಂಭಿಸಿ ಆ ಮೂಲಕ ತೆಂಕು, ಬಡಗು, ಬಡಾಬಡಗು ಯಕ್ಷಗಾನದ ದಾಖಲೀಕರಣ, ನಿರಂತರ ಕಾರ್ಯಚಟುವಟಿಕೆಗಳನ್ನು ಆಯೋಜಿಸಲು ಯೋಚಿಸಿ ಕಾರ್ಯೋನ್ಮುಖವಾಗಲಾಯಿತು. ಈಗಾಗಲೇ ಸಿರಿಬಾಗಿಲಿನಲ್ಲಿ ಸಾಂಸ್ಕೃತಿಕ ಭವನದ ಕಾಮಗಾರಿ ಈಗಾಗಲೇ 80% ಮುಗಿದಿದೆ ಎಂದರು.
ಭವನವನ್ನು ಯಕ್ಷಗಾನಸಕ್ತರಿಗೆ ಅಧ್ಯಯನ ಕೇಂದ್ರವಾಗಿ ರೂಪಿಸಲಾಗುವುದು. ಕೀರ್ತಿಶೇಷರಾದ ಕಲಾವಿದ ಪೋಟೋ, ಇನ್ನಿತರ ದಾಖಲೆಯನ್ನು ಭವನದ ಮ್ಯೂಸಿಯಂನಲ್ಲಿ ದಾಖಲೆಯಾಗಿರಿಸಲಿದೆ ಎಂದರು.
ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್, ಉಪನ್ಯಾಸಕ, ಹವ್ಯಾಸಿ ಕಲಾವಿದ ಸುಜಯೀಂದ್ರ ಹಂದೆ, ನ್ಯಾಯವಾದಿ ಎಸ್.ಆರ್.ಕಾಳರ್ವಕರ್ ಉಪಸ್ಥಿತರಿದ್ದರು.
‘ಯಕ್ಷಾನುಗ್ರಹ’ ವಾಟ್ಸಾಪ್ ಬಳಗದ ರಾಘವೇಂದ್ರ ಉಡುಪ ನೇರಳಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿರು.
ನೇರಳಕಟ್ಟೆ ಶ್ರೀಗಿರಿಯ ಕ್ಷೇತ್ರದ ಮುಖ್ಯಸ್ಥರಾದ ಶಂಕರ್ ಪೈ, ಹಿರಿಯ ಅರ್ಥಧಾರಿ ವೈಕುಂಠ ಹೇರ್ಳೆ ಅನಿಸಿಕೆ ವ್ಯಕ್ತಪಡಿಸಿದರು. ‘ಯಕ್ಷಾನುಗ್ರಹ’ ವಾಟ್ಸಾಪ್ ಬಳಗದ ಸದಸ್ಯರು, ಗಣ್ಯರು ಹಾಜರಿದ್ದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.