ಕುಂದಾಪುರ ಮಿರರ್ ಸುದ್ದಿ…
ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರ ವರೆಗೆ ನಡೆಯುವ ಪ್ರತೀ ಮನೆ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನವನ್ನು ರಾಜ್ಯದ ಪ್ರತೀ ಮನೆ ಮನೆಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರು ಒಟ್ಟು ಸೇರಿ , ಕೌಟುಂಬಿಕ ಹಬ್ಬವನ್ನು ಆಚರಿಸುವ ರೀತಿಯಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುವಂತೆ ರಾಜ್ಯದ ಇಂಧನ , ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಹರ್ ಘರ್ ತಿರಂಗ ಕಾರ್ಯಕ್ರಮವನ್ನು ಆಯೋಜಿಸುವ ಕುರಿತ , ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಪಂಚಾಯತ್ ಪಿಡಿಓ ಗಳಿಗೆ ನಡೆದ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ಯ್ರ ಸಿಗುವಾಗ ನಾವ್ಯಾರೂ ಹುಟ್ಟಿರಲಿಲ್ಲ, ನಾವು ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಈಗ ಸ್ವಾತಂತ್ರ‍್ಯದ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಸದವಕಾಶ ಸಿಕ್ಕಿದೆ. ಆದ್ದರಿಂದ 3 ದಿನಗಳ ಕಾಲ ಸಂಪೂರ್ಣವಾಗಿ ಅಜಾದಿ ಕಾ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಸ್ವಾತಂತ್ರ‍್ಯ ಹೋರಾಟಕ್ಕೆ ನಿಜವಾದ ಗೌರವವನ್ನು ಸಲ್ಲಿಸಬೇಕು ಪ್ರತಿಯೊಂದು ಮನೆಯಲ್ಲಿಯೂ ದೇವರ ಪೂಜೆಯಷ್ಟೇ ಗೌರವದಿಂದ ಮನೆಮಂದಿ ಎಲ್ಲಾ ಸೇರಿ ಸಿಹಿ ವಿತರಿಸಿ ರಾಷ್ಟ್ರಗೀತೆ ಹಾಡಿ ಸಂಭ್ರಮದಿಂದ ಧ್ವಜಾರೋಹಣ ನಡೆಸಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ‍್ಯ ಹೋರಾಟ ಎಂದರೇ ಉತ್ತರ ಭಾರತದ ಸ್ವಾತಂತ್ರ‍್ಯ ಹೋರಾಟಗಳು ನೆನಪಾಗುತ್ತವೆ, ಆದರೇ ನಮ್ಮ ರಾಜ್ಯದಲ್ಲಿಯೂ ಅನೇಕ ಸ್ವಾತಂತ್ರ‍್ಯ ಹೋರಾಟಗಳು ನಡೆದಿವೆ. 1857ರ ಸ್ವಾತಂತ್ರ‍್ಯ ಸಂಗ್ರಾಮದಿಂದಲೇ ಸ್ವಾತಂತ್ರ‍್ಯ ಹೋರಾಟ ಆರಂಭವಾಯಿತು ಎನ್ನುವ ಚರ್ಚೆ ಇದೆ. ಆದರೆ 1837ರಲ್ಲಿ ಸುಳ್ಯದಿಂದ ರೈತರು ಮಂಗಳೂರಿಗೆ ಬಂದು, ಬಾವುಟಗುಡ್ಡೆಯಲ್ಲಿ ಬಾವುಟ ಹಾರಿಸಿ ಮಂಗಳೂರನ್ನು ಸ್ವತಂತ್ರ ಎಂದು ಘೋಷಿಸಿದ್ದರು. ಪೋರ್ಚುಗೀಸರ ವಿರುದ್ಧ ರಾಣಿ ಅಬ್ಬಕ್ಕ ನಡೆಸಿ ಹೋರಾಟ ದೇಶದಲ್ಲಿಯೇ ಪ್ರಥಮ ಹೋರಾಟವಾಗಿತ್ತು , ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್ ಎಂದು ಕರೆಯಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ. ಸ್ವಾತಂತ್ರ್ಯ ಹೋರಾಟ ಪ್ರಮುಖ ಘಟನೆಗಳು ನಡೆದ 75 ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟ ಕುರಿತ 75 ಪುಸ್ತಕಗಳನ್ನು ಹೊರತರಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಮನೆ, ಸರ್ಕಾರಿ ಕಚೇರಿ, ಅಂಗಡಿ ವ್ಯಾಪಾರಿ ಕಟ್ಟಡಗಳ ಮೇಲೆ ಒಟ್ಟು 1 ಕೋಟಿ ತ್ರಿವರ್ಣ ಧ್ವಜಗಳನ್ನು ಹಾಗೂ ಉಡುಪಿ ಜಿಲ್ಲೆಯಲ್ಲಿ 4 ಲಕ್ಷ ರಾಷ್ಟ್ರಧ್ವಜಗಳನ್ನು ಹಾರಿಸಲು ಉದ್ದೇಶಿಸಲಾಗಿದೆ.
ಇದು ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ, ಜನರ ಭಾವನಾತ್ಮಕ ಕಾರ್ಯಕ್ರಮವಾಗಬೇಕು. ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಉತ್ಸಾಹದಿಂದ ಪ್ರತಿ ಮನೆಗೂ ಧ್ವಜ ತಲುಪುವಂತೆ ಮಾಡಬೇಕು ಎಂದರು.
ಪ್ರತಿ ಮನೆಯ ಮೇಲೂ ಧ್ವಜ ಹಾರಿಸಬೇಕು ಎಂಬ ಕಾರಣಕ್ಕೆ ಧ್ವಜಗಳನ್ನು ಉಚಿತವಾಗಿ ವಿತರಿಸಬಾರದು. ಪ್ರತಿಯೊಬ್ಬರು ಧ್ವಜಗಳನ್ನು ಖರೀದಿಸಿಯೇ ಹಾರಿಸಬೇಕು. ಗೌರವಯುತವಾಗಿ ಧ್ವಜಾರೋಹಣಕ್ಕೆ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಅಗೌರವ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ಎಚ್ಚರಿಕೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಪ್ರಸನ್ನ ಎಚ್.ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಉಪಸ್ಥಿತರಿದ್ದರು.
ಸಭೆಗೆ ಮೊದಲು ಸಚಿವರು ಸಭಾಭವನದ ಹೊರಗೆ ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯರ ಧ್ವಜ ಮಾರಾಟ ಮಳಿಗೆಯಲ್ಲಿ ಗ್ರಾಹಕರಿಗೆ ಧ್ವಜಗಳನ್ನು ಹಸ್ತಾಂತರಿಸಿದರು.