ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಾಲೆ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಎರಡನೇ ತರಗತಿ ತರಗತಿಯ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದ್ದು ಮಂಗಳವಾರ ಸಂಜೆವರೆಗೂ ಆಕೆ ಮೃತದೇಹ ಪತ್ತೆಯಾಗದಿದ್ದು ಇಡೀ ದಿನ ಶೋಧ ಕಾರ್ಯ ನಡೆಸಲಾಗಿತ್ತು.
ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೇ ಪುತ್ರಿ ಸನ್ನಿಧಿ (7) ನೀರು ಪಾಲಾಗಿದ್ದು ಮನೆಮಂದಿ ಆಕ್ರಂಧನ ಮುಗಿಲುಮುಟ್ಟಿದೆ. ಪ್ರದೀಪ್ ರಿಕ್ಷಾ ಚಾಲಕರಾಗಿದ್ದು ಸುಮಿತ್ರಾ ಗೃಹಿಣಿ.
ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಸನ್ನಿಧಿ ಓದುತ್ತಿದ್ದಳು. ಸೋಮವಾರ ಮಳೆ ಕಾರಣಕ್ಕಾಗಿ 2.30 ರ ಹೊತ್ತಿಗೆ ಶಾಲೆಗೆ ರಜೆ ನೀಡಿ ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಸನ್ನಿಧಿ ಇತರ ಐವರು ವಿದ್ಯಾರ್ಥಿಗಳ ಜೊತೆ ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು, ದಾಟುವಾಗ ಆಯತಪ್ಪಿ ತುಂಬಿ ಹರಿಯುವ ಹಳ್ಳಕ್ಕೆ ಬಿದ್ದಿದ್ದಾಳೆ. ವಿಷಯ ತಿಳಿದ ಕೂಡಲೇ ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದಾರೆ. ಬೊಳಂಬಳ್ಳಿ ನದಿಗೆ ಸೇರಿದ ಈ ಹಳ್ಳ ಸೋಮವಾರ ರಭಸದಿಂದ ಹರಿದಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋದ ಬಾಲಕಿ ಶೋಧ ಕಾರ್ಯ ಮಂಗಳವಾರ ಮುಸ್ಸಂಜೆ ತನಕ ಭರದಿಂದ ಸಾಗಿದೆ.
ಡಿಸಿ, ಮಾಜಿ ಶಾಸಕ ಭೇಟಿ..
ಮೃತ ಬಾಲಕಿಯ ಮನೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಂಗಳವಾರ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಕಾಲುಸಂಕ ಇರುವ ಬೀಜಮಕ್ಕಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕೂಡ ಮೃತ ಬಾಲಕಿ ಮನೆಗೆ ಭೇಟಿಯಿತ್ತು ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಘಟನಾ ಸ್ಥಳಕ್ಕೆ ಉಡುಪಿ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿಡಿಪಿಐ ಎನ್.ಕೆ. ಶಿವರಾಜ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಭೇಟಿ ನೀಡಿದ್ದರು.
ದಿನವಿಡೀ ಶೋಧ ಕಾರ್ಯ..
ಮುಂಜಾನೆಯೇ ಆಗಮಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಬೈಂದೂರು ತಹಶಿಲ್ದಾರ್ ಕಿರಣ್ ಗೌರಯ್ಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಬೈಂದೂರು ಡೆಪ್ಯೂಟಿ ತಹಶಿಲ್ದಾರ್ ಭೀಮಪ್ಪ, ಕಂದಾಯ ಇಲಾಖೆಯ ರಂಗರಾಜು, ಕಂದಾಯ ನಿರೀಕ್ಷಕ ಮಂಜು, ಗ್ರಾಮ ಲೆಕ್ಕಿಗ ಆಂಜನಪ್ಪ ಸಹಿತ ತಾಲ್ಲೂಕು ಆಡಳಿತ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿ ಶೋಧ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಸನ್ನಿಧಿ ಮೃತದೇಹ ಪತ್ತೆಗೆ ಬೈಂದೂರು ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ ಪೂಜಾರಿ, ಕುಂದಾಪುರ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಕೆ.ಟಿ ಗೌಡ, ಬೈಂದೂರು ಪೊಲೀಸರು, ಸ್ಥಳೀಯರು, ಈಜುಪಟು- ಮುಳುಗು ತಜ್ಞರಾದ ದಿನೇಶ್ ಖಾರ್ವಿ ಗಂಗೊಳ್ಳಿ, ಸಂತೋಷ್ ಖಾರ್ವಿ, ವೆಂಕಟೇಶ ಖಾರ್ವಿ, ಸಂದೀಪ್ ಖಾರ್ವಿ, ಸುರೇಶ್ ಖಾರ್ವಿ, ನಾಗಪ್ಪ ಖಾರ್ವಿ, ಪ್ರವೀಶ್ ಖಾರ್ವಿ ಹಾಗೂ ಮುಳುಗು ತಜ್ಞರು ದಿನವಿಡಿ ಶೋಧ ಕಾರ್ಯದಲ್ಲಿ ತೊಡಗಿದ್ದರು.
ನಮಗೆ ಸ್ವಾತಂತ್ರ್ಯ ಬಂದಿಲ್ಲ..!
ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತಿದೆ. ಆದರೆ ಇಲ್ಲಿನ ಜನಕ್ಕೆ ಮಾತ್ರ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಪಕ್ಷ, ವ್ಯಕ್ತಿ ಎನ್ನದೆ ನಮ್ಮ ಊರಿನ ನೆಟ್ವರ್ಕ್, ಕಾಲು ಸಂಕದ ವಿಚಾರದ ಬಗ್ಗೆ ದಶಕಗಳಿಂದಲೂ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಿದ್ದೇವೆ. ಇದೇ ಕಾಲುಸಂಕದಲ್ಲಿ ಬಂದು ಮತ ಕೇಳುವ ಜನಪ್ರತಿನಿಧಿಗಳು ಚುನಾವಣೆ ಬಳಿಕ ಇತ್ತ ಕಡೆ ತಲೆ ಹಾಕುವುದಿಲ್ಲ. ಪ್ರತಿ ವರ್ಷ ಮಳೆಗಾಲ ಬಂದಾಗ ಕೃಷಿ ಕಾರ್ಯ, ತಿರುಗಾಡುವ ಸಲುವಾಗಿ ಇಲ್ಲಿನ ಜನರು ಕಾಲುಸಂಕ ಮಾಡಿಕೊಳ್ಳುತ್ತಿದ್ದೆವು. ಈ ದುರ್ಘಟನೆ ನಮ್ಮ ವ್ಯವಸ್ಥೆಯ ನಿಷ್ಕ್ರಿಯತೆ ತೋರಿಸುತ್ತದೆ. ಓಟು ಪಡೆಯುವ ರಾಜಕಾರಣಿಗಳು ಕೋಟಿಗಟ್ಟಲೆ ಅನುದಾನ ಅಗತ್ಯವಿಲ್ಲದೆಡೆ ವಿನಿಯೋಗ ಮಾಡುವ ಬದಲು ಆದ್ಯತೆ ಮೇರೆಗೆ ಇಂತಹ ಸಮಸ್ಯೆ ಬಗೆಹರಿಸಬೇಕು.
– ಪ್ರದೀಪ್ (ಸ್ಥಳೀಯ ನಿವಾಸಿ)
ನನಗೆ ಈಗ 26 ವರ್ಷ. ನಾನು 8 ವರ್ಷ ವಯಸ್ಸಲ್ಲಿ ಈ ಕಾಲು ಸಂಕ ದಾಟುವಾಗ ಆಯತಪ್ಪಿ ಬಿದ್ದಿದ್ದು ಸಮೀಪ ನಾಟಿ ಕೆಲಸದಲ್ಲಿ ತೊಡಗಿದ್ದವರು ಬಚಾವ್ ಮಾಡಿದ್ದರು. ಈಗಲೂ ಇದೇ ಸ್ಥಿತಿ ನಮ್ಮೂರಲ್ಲಿ ಮುಂದುವರೆದಿರುವುದು ಶೋಚನೀಯ ಪರಿಸ್ಥಿತಿಯಾಗಿದೆ.
– ನಾಗೇಂದ್ರ ಗಾಣಿಗ ( ಸ್ಥಳೀಯ ನಿವಾಸಿ)
ಶಾಲೆ ಬೇಗ ಬಿಡುವ ಬಗ್ಗೆ ಮಾಹಿತಿ ನೀಡಿದಾಗ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದು ಉಳಿದ ಮೂವರು ಮಕ್ಕಳನ್ನು ಕರೆದೊಯ್ಯುವಂತೆ ಶಿಕ್ಷಕರು ಹೇಳಿದಾಗ ಎಲ್ಲರನ್ನು ಕರೆತಂದು ಸಂಕ ದಾಟಿಸುತ್ತಿದ್ದಾಗ ಸನ್ನಿಧಿ ಆಯತಪ್ಪಿ ಬಿದ್ದಳು. ಒಂದು ಕ್ಷಣ ನಾನು ಏನು ಮಾಡು ಮಾಡಬೇಕು ತಿಳಿಯಲಾಗಿಲ್ಲ, ಕಿರುಚಿದೆ. ನನ್ನ ಮಗಳ ಆತ್ಮೀಯ ಸ್ನೇಹಿತೆಯಾಗಿದ್ದ ಸನ್ನಿಧಿ ಬೇರೆಯಲ್ಲ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಬೇರೆಯಲ್ಲ. ತುಂಬಾ ನೊಂದಿದ್ದೇನೆ.
– ಭಾರತಿ (ಶಾಲೆಯ ಬಿಸಿಯೂಟ ತಯಾರಿ ಸಿಬ್ಬಂದಿ)
ಘಟನೆ ಬಹಳ ನೋವುಂಟು ಮಾಡಿದೆ. ಮಳೆಗಾಲದ ಸಂದರ್ಭದಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವುದು ಕರ್ತವ್ಯವಾಗುತ್ತದೆ. ಬೈಂದೂರು ಕ್ಷೇತ್ರದಲ್ಲಿ ಬಹಳಷ್ಟು ನದಿ ಹರಿಯುವ ಕಾರಣದಿಂದಾಗಿ ಕಾಲುಸಂಕ ನಿರ್ಮಾಣದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ರಸ್ತೆ ನಿರ್ಮಾಣಕ್ಕಿಂತ ಆದ್ಯತೆಯಿರುವೆಡೆ ಸೇತುವೆ ನಿರ್ಮಾಣವಾಗುವ ಕ್ರಮಕೈಗೊಳ್ಳಬೇಕು. ಇಂತಹ ಕಾಲುಸಂಕ ಇರುವಲ್ಲಿ ಪೋಷಕರು ಕೂಡ ಜಾಗರುಕತೆಯಿಂದಿರುವುದು ಉತ್ತಮ.
– ಕೆ. ಗೋಪಾಲ ಪೂಜಾರಿ (ಬೈಂದೂರು ಮಾಜಿ ಶಾಸಕ)
ಸೋಮವಾರ ಬೆಳಿಗ್ಗೆ ಮಳೆ ಕಮ್ಮಿಯಿದ್ದು ನೀರಿನ ಪ್ರಮಾಣವೂ ಹೆಚ್ಚಿರಲಿಲ್ಲ. ಅಲ್ಲದೆ ಮಂಗಳವಾರ ರಜೆಯಿದ್ದರಿಂದ ನಾನೇ ಮೊಮ್ಮಗಳನನ್ನು ಮನೆಯಿಂದ ಶಾಲೆಗೆ ಬಿಟ್ಟಿದ್ದೆ. ಆದರೆ ಅವಳು ಮತ್ತೆ ಮನೆಗೆ ಬರಲೇ ಇಲ್ಲ. ಸನ್ನಿಧಿ ನೀರಿಗೆ ತುಂಬಾ ಹೆದರುತ್ತಿದ್ದಳು.
– ಸರೋಜಾ, ಚಿಕ್ಕು (ಸನ್ನಿಧಿ ಅಜ್ಜಿ)
ಘಟನೆ ನಡೆದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಮಂಗಳವಾರ ಮುಂಜಾನೆ 7 ಗಂಟೆಗೆ ಜಿಲ್ಲಾಧಿಕಾರಿಗಳು ಆಗಮಿಸಿದ್ದಾರೆ. ಸಂಜೆ ತನಕವೂ ಶೋಧ ಕಾರ್ಯಾಚರಣೆ ನಡೆಸಿದ್ದು ಕತ್ತಲಾದ ಬಳಿಕ ಮುಗಿಸಿ ಬುಧವಾರ ಬೆಳ್ಳಿಗ್ಗೆನಿಂದ ಮತ್ತೆ ಆರಂಭಿಸಲಾಗುತ್ತದೆ. ಇಂತಹ ದುರ್ಘಟನೆ ಆಗದಂತೆ ಉತ್ತಮ ಸೇತುವೆ ನಿರ್ಮಾಣಕ್ಕಾಗಿ ಸಂಬಂದಪಟ್ಟ ಇಲಾಖೆ ಹಾಗೂ ಸ್ಥಳಿಯಾಡಳಿತದಿಂದ ವರದಿ ಪಡೆದು ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಮಳೆಗಾಲದಲ್ಲಿ ಇಂತಹ ಘಟನೆ ಮರುಕಳಿಸದಿರಲು ಶಿಕ್ಷಕರು, ಪೋಷಕರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.
– ಕೆ. ರಾಜು ( ಕುಂದಾಪುರ ಸಹಾಯಕ ಕಮಿಷನರ್)