ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ
ಕುಂದಾಪುರ: ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳಿಗೆ ಎರಡನೇ ಹಂತದಲ್ಲಿ ರವಿವಾರ ಮತದಾನ ನಡೆದಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದಲೇ ಮತದಾರರು ಉತ್ಸಾಹದಿಂದಲೇ ಬಂದು ಮತ ಚಲಾಯಿಸುತ್ತಿರುವುದು ಕಂಡು ಬಂತು.
ಕುಂದಾಪುರದ 43 ಗ್ರಾ.ಪಂ.ಗಳ ಒಟ್ಟು ಇರುವ 554 ಸ್ಥಾನಗಳ ಪೈಕಿ 24 ಕಡೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸ್ಪರ್ದೀಸಿರುವ 1,262 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, 9 ಗಂಟೆಯ ಸುಮಾರಿಗೆ ಒಟ್ಟಾರೆ 43 ಗ್ರಾ.ಪಂ.ಗಳಲ್ಲಿ ಶೇ. 12.41 ಪ್ರತಿಶತ ಮತದಾನವಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ. 30.17 ಮಂದಿ ಮತದಾನ ಮಾಡಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಒಟ್ಟಾರೆ ಶೇ. 49.49 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇ. 61.32 ರಷ್ಟು ಮತದಾನವಾಗಿತ್ತು. ಸಂಜೆ 5ಗಂಟೆಗೆ ಶೇ. 76.09 ರಷ್ಟು ಮತದಾನ ನಡೆಯಿತು.
43 ಗ್ರಾ.ಪಂ.ಗಳ ಪೈಕಿ ಒಟ್ಟಾರೆ 20 ನಕ್ಸಲ್ ಭಾಗದ ಮತಗಟ್ಟೆಗಳಿದ್ದು, ಈ ಪೈಕಿ ಮಚ್ಚಟ್ಟುವಿನ 2 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆದಿಲ್ಲ. ಇನ್ನುಳಿದ 18 ಮತಗಟ್ಟೆಗಳಾದ ಕೆರಾಡಿ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ, ಕೆರಾಡಿ ಗ್ರಾ.ಪಂ., ಹೊಸಂಗಡಿ ಗ್ರಾಮದ ಸರಕಾರಿ ಕಿ.ಪ್ರಾ. ಶಾಲೆ, ಹಿ.ಪ್ರಾ. ಶಾಲೆ, ಅಮಾಸೆಬೈಲು ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ, ಜಡ್ಡಿನಗದ್ದೆ ಶಾಲೆ, ರಟ್ಟಾಡಿ ಶಾಲೆ, ನಡಂಬೂರು ಶಾಲೆ, ಮಚ್ಚಟ್ಟುವಿನ ತೊಂಬಟ್ಟು, ಯಡಮೊಗೆ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿರುವ ನಕ್ಸಲ್ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗಾಗಿ ಸಶಸ್ತ್ರ ಮೀಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.
ಎರಡನೇ ಹಂತದ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ,ಬೈಂದೂರಿನ ಬಿ.ಎಂ. ಸುಕುಮಾರ್, ಮಾಜಿ ಶಾಸಕರಾದ ಎ.ಜಿ. ಕೊಡ್ಗಿ, ಬಿ. ಅಪ್ಪಣ್ಣ ಹೆಗ್ಡೆ, ಕೆ. ಗೋಪಾಲ ಪೂಜಾರಿ, ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮತ ಚಲಾಯಿಸಿದವರಲ್ಲಿ ಪ್ರಮುಖರಾಗಿದ್ದಾರೆ.
