ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಈ ಸಾಲಿನ ವಾರ್ಷಿಕ ಮಹಾಸಭೆಯು ಮುಂಬರುವ ಆಕ್ಟೊಬರ್ 30 ರ ಆದಿತ್ಯವಾರ ಕುಂದಾಪುರದ ಶ್ರೀ ಕುಂದೇಶ್ವರ ದೇವಾಲಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರಿಷತ್ ಅಧ್ಯಕ್ಷ ಅನಂತ ಪದ್ಮನಾಭ ಬಾಯಿರಿ ತಿಳಿಸಿದ್ದಾರೆ.
ಹಂಗಳೂರಿನ ಶ್ರೀ ಕೃಷ್ಣ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಹಾಸಭೆಯ ಬಗ್ಗೆ ವಿವರಗಳನ್ನು ತಿಳಿಸಿದರು.
ಪರಿಷತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ವಲಯಗಳೂ ಜಡತ್ವ ತೊರೆದು ಧರ್ಮ – ಸಂಸ್ಕೃತಿ ರಕ್ಷಣಾ ಮಾಹಿತಿ ಮತ್ತು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ನಡೆಸಬೇಕು. ಸನಾತನ ಧರ್ಮಪಾಲಕರು ಎನಿಸಿಕೊಂಡ ಬ್ರಾಹ್ಮಣರೇ ನಿಷ್ಕ್ರಿಯರಾದರೆ ಕೆಟ್ಟ ಸಂದೇಶ ರವಾನೆಯಾಗುವುದು. ಹೊಸ ವಲಯ ರಚನೆಯ ಯೋಜನೆ ಕಾರ್ಯಸಾಧುವಲ್ಲ. ಜಿಲ್ಲೆಯಲ್ಲೇ ಕುಂದಾಪುರ ತಾಲೂಕು ಪರಿಷತ್ ಕ್ರಿಯಾಶೀಲತೆಯಲ್ಲಿ ಮುಂದಿದೆ. 21ನೇ ಶತಮಾನದಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದು ಬಿ ಬಿ ಸಿ ಹೇಳಿದೆ. ಇದನ್ನು ಸಾಕಾರಗೊಳಿಸುವಲ್ಲಿ ವಿಪ್ರರ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ತಿಳಿಹೇಳಿದರು.
ಬ್ರಾಹ್ಮಣ ಪರಿಷತ್ ನ ಮುಖವಾಣಿ ‘ವಿಪ್ರವಾಣಿ’ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಕೃಷ್ಣಾನಂದ ಚಾತ್ರ ಮಾತನಾಡಿ, ಈ ಬಾರಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕುಂದಾಪುರ ನಗರದ ವಿವಿಧೆಡೆ ಪೂಜಿಸಲಾದ ಎಲ್ಲ ಗಣೇಶ ವಿಗ್ರಹಗಳನ್ನೂ ಒಂದೇ ದಿನ ಒಟ್ಟಾಗಿ ಭವ್ಯ ಮೆರವಣಿಗೆಯ ಮೂಲಕ ವಿಸರ್ಜಿಸಲು ನಿರ್ಧರಿಸಲಾಗಿದೆ. ಸಪ್ಟೆಂಬರ್ 4 ರಂದು ವಿಸರ್ಜನಾ ಮೆರವಣಿಗೆ ನಡೆಯುತ್ತದೆ ಎಂದರು. ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿರುವ ಈ ಮೆರವಣಿಗೆಯ ಮೂಲಕ ಹಿಂದೂ ಶಕ್ತಿ ಮತ್ತು ಏಕತೆಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಪರಿಷತ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ಮಾತನಾಡಿ, ವಿವಿಧ ವಲಯಗಳವರು ವಿಶೇಷ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಮರವಂತೆ ವಲಯದವರು ವಿಪ್ರ ಭವನ ನಿರ್ಮಿಸಿದ್ದಲ್ಲದೆ, ವಿಪ್ರ ಸೊಸೈಟಿಯನ್ನೂ ಪ್ರಾರಂಭಿಸಿದ್ದಾರೆ. ಬೆಳ್ವೆಯಲ್ಲಿ ವಿಪ್ರಭವನ ನಿರ್ಮಿಸಲು ನಿವೇಶನ ಪಡೆಯಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋಟೇಶ್ವರ ಮತ್ತು ಕುಂದಾಪುರ ವಲಯಗಳು ಸಶಕ್ತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಎಲ್ಲರೂ ಪರಿಷತ್ತಿನ ಆಜೀವ ಸದಸ್ಯತ್ವ ಹೊಂದಬೇಕು ಎಂದು ಮನವಿ ಮಾಡಿದರು.
ವಿಪ್ರವಾಣಿ ಸಂಪಾದಕ ಪ್ರೊ. ಶಂಕರ್ ರಾವ್ ಕಾಳಾವರ ವಿಪ್ರವಾಣಿ ಬಗ್ಗೆ ವಿವರ ನೀಡಿ, ಆರಂಭದಲ್ಲಿ ಒಂದು ಪೇಪರ್ ಮಾದರಿಯಲ್ಲಿದ್ದ ಪತ್ರಿಕೆ ಈಗ ಪುಸ್ತಕ ರೂಪಕ್ಕೆ ಹಿಗ್ಗಿದೆ. ಸದಸ್ಯರು ಉದಾರವಾಗಿ ಪ್ರಾಯೋಜಕತ್ವ ನೀಡಿ ಪತ್ರಿಕೆ ಇನ್ನಷ್ಟು ಬೆಳೆಯುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಉಪಸಮಿತಿ ಸದಸ್ಯ ಗಣೇಶ್ ರಾವ್ ಕುಂಭಾಶಿ, ಮಂಜುನಾಥ ರಾವ್ ಮತ್ತಿತರರು ಮಾತನಾಡಿ ಸಲಹೆಗಳನ್ನು ನೀಡಿದರು.
ಮಹಿಳಾ ಘಟಕಾಧ್ಯಕ್ಷೆ ಭಾವನಾ ಭಟ್, ಸಪ್ಟಂಬರ್ 17ರ ಶನಿವಾರ ಕುಂದಾಪುರದಲ್ಲಿ ಪರಿಷತ್ ನ ಮಹಿಳಾ ಘಟಕ ವಾರ್ಷಿಕ ಸಮಾವೇಶ ನಡೆಯಲಿದೆ ಎಂದು ಘೋಷಿಸಿದರು.
ಖಜಾಂಚಿ ವಿಶ್ವಂಬರ ಐತಾಳ ಲೆಕ್ಕಪತ್ರ ಮಂಡಿಸಿದರು. ಪರಿಷತ್ ಪೂರ್ವಾಧ್ಯಕ್ಷರುಗಳು, ವಿವಿಧ ವಲಯ ಪದಾಧಿಕಾರಿಗಳು, ರಾಜ್ಯ ಉಪ ಸಮಿತಿಯ ಉಡುಪಿ ಜಿಲ್ಲಾ ಘಟಕ ಸಂಚಾಲಕಿ ಶಾಂತಾ ಗಣೇಶ್ ಉಪಸ್ಥಿತರಿದ್ದರು. ಅಗಲಿದ ವಿಪ್ರ ಚೇತನಗಳಿಗೆ ಸದ್ಗತಿ ಕೋರಿ ಸಭಾರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ವಿಶ್ವಂಬರ ಐತಾಳ ವಂದಿಸಿದರು.