ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನೂರಾರು ದೈವ ದೇವರುಗಳಿಗೆ ಮೂರ್ತರೂಪ ನೀಡಿದ ಹಿರಿಯ ಶಿಲ್ಪಿ ಉಪ್ಪುಂದದ ರತ್ನಾಕರ ಎಸ್.ಗುಡಿಗಾರ್ ಅವರು 2021ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉಪ್ಪುಂದ ನ್ಯೂ ಜನತಾ ಕಾಲೋನಿ ನಿವಾಸಿಯಾಗಿರುವ ರತ್ನಾಕರ ಗುಡಿಗಾರ್ ಅವರು ಕಳೆದ 60 ವರ್ಷಗಳಿಂದ ವಂಶಪಾರಂಪರ್ಯವಾಗಿ ಮರದಿಂದ ದೇವರ ಮೂರ್ತಿ ಕೆತ್ತನೆ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ತಮ್ಮ 84 ವರ್ಷದ ವಯಸ್ಸಿನಲ್ಲಿಯೂ ಸೇವಾ ಕಾರ್ಯವನ್ನು ಮುಂದುವರಿಸಿರುವ ಗುಡಿಗಾರರು, ವರ್ಷಕ್ಕೆ 150ಕ್ಕೂ ಹೆಚ್ಚು ದೇವರ ಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ.
ದೆಹಲಿ, ಭೂಪಾಲ್, ಚೆನೈ ಹಾಗೂ ರಾಜ್ಯದ ವಿವಿಧೆಡೆ ಇವರ ಕೆತ್ತನೆಯ ಮೂರ್ತಿಗಳು ಪೂಜಿಸಲ್ಪಡುತ್ತಿದೆ. ಉಡುಪಿ ಜಿಲ್ಲೆಯ ನೂರಾರು ದೈವಸ್ಥಾನಗಳ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಒಂದು ಅಡಿಯಿಂದ 28 ಅಡಿಯ ತನಕದ ಮೂರ್ತಿಗಳನ್ನು ಅವರು ಕೆತ್ತನೆ ಮಾಡಿದ್ದಾರೆ.
ರತ್ನಾಕರ್ ಗುಡಿಗಾರ್ ರಿಂದ ತರಬೇತಿ ಪಡೆದ ಮಕ್ಕಳು ಈಗ ಈ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ರತ್ನಾಕರ ಗುಡಿಗಾರ ಅವರ ಸೇವೆಯನ್ನು ಗುರುತಿಸಿ ಸಾಂಪ್ರದಾಯಿಕ ಶಿಲ್ಪ ವಿಭಾಗದಲ್ಲಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ರೂ. 50, 000 ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೆಪ್ಟಂಬರ್ 8ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.