2022-23ನೇ ಸಾಲಿನ ಕುಂದಾಪುರ – ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ದಸರಾ ಕ್ರೀಡಾ ಕೂಟಗಳು ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಇನ್ನಷ್ಟು ಸಾಧನೆ ಮಾಡಬಹುದು. ನಮಗೆಲ್ಲರಿಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಗುರುರಾಜ್ ಪೂಜಾರಿಯೇ ಸೂರ್ತಿ ಎಂದು ಕುಂದಾಪುರದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ ಹೇಳಿದರು.
ಅವರು ಶನಿವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ೨೦೨೨-೨೩ನೇ ಸಾಲಿನ ಕುಂದಾಪುರ – ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಳುಗಳಿಗೆ ಶುಭ ಹಾರೈಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮಾತನಾಡಿ, ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ದಸರಾ ಕ್ರೀಡಾ ಕೂಟ ನಡೆದಿರಲಿಲ್ಲ. ಆದರೆ ಈ ಬಾರಿ ಅದ್ಧೂರಿ ದಸರಾ ಆಚರಣೆ, ಕ್ರೀಡಾಕೂಟ ನಡೆಯುತ್ತಿದೆ. ಆಟದಲ್ಲಿ ಸೋಲು- ಗೆಲುವು ಸಹಜ. ಆದರೆ ಭಾಗವಹಿಸುವುದು ಮುಖ್ಯ ಎಂದವರು ಹೇಳಿದರು.
ಪುರಸಭಾ ಸದಸ್ಯೆ ರೋಹಿಣಿ ಉದಯ ಕುಮಾರ್, ಬೈಂದೂರು ತಾ| ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ಪ್ರಭಾಕರ, ಕುಂದಾಪುರದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಬೈಂದೂರಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ ಕಾರ್‍ಯಕ್ರಮ ನಿರೂಪಿಸಿ, ಪ್ರಕಾಶ್ ಶೆಟ್ಟಿ ಮೊಳಹಳ್ಳಿ ವಂದಿಸಿದರು.