ಉಡುಪಿ :ಜಿಲ್ಲೆಯಲ್ಲಿ ಮಳೆಹಾನಿ ಕುರಿತು ಕೆಂದ್ರ ಅಧ್ಯಯನ ತಂಡದಿಂದ ಪರಿಶೀಲನೆ

0
256

ಕುಂದಾಪುರ ಮಿರರ್ ಸುದ್ದಿ…

ಉಡುಪಿ : ಜಿಲ್ಲೆಯಲ್ಲಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗಳನ್ನೂ ಹಾಗೂ ಮೀನುಗಾರಿಕಾ ಬೋಟ್ ಹಾಗೂ ಪರಿಕರಗಳನ್ನು ವಿಮಾ ವ್ಯಾಪ್ತಿಗೆ ತರುವಂತೆ ಅವರುಗಳನ್ನು ಪ್ರೋತ್ಸಾಹಿಸಬೇಕು. ಇದರಿಂದ ವೈಯಕ್ತಿಕ ನಷ್ಠದ ಪ್ರಮಾಣವು ಕಡಿಮೆಯಾಗುತ್ತದೆ ಎಂದು ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ಅವರು ತಿಳಿಸಿದರು.

ಅವರು ಇಂದು ಜಿಲ್ಲೆಯಲ್ಲಿ ಮಳೆಹಾನಿ ಪರಿಸ್ಥಿತಿಯ ಅಧ್ಯಯನಕ್ಕೆ ಆಗಮಿಸಿ, ಉಡುಪಿ ನಗರದ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತದಿಂದ ನಷ್ಠದ ಅಂಕಿ ಅಂಶಗಳ ವಿವರಗಳನ್ನು ಪಡೆದು ಮಾತನಾಡಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಮತ್ತಿತರ ಬೆಳೆ ವಿಮೆಗೆ ಸರ್ಕಾರವು ಪ್ರೀಮಿಯಂ ಹಣವನ್ನು ಶೇ.98 ರಷ್ಟು ತುಂಬುತ್ತಿದ್ದು, ಬಾಕಿ ಉಳಿದ ಶೇ. 2 ರಷ್ಟು ಹಣವನ್ನು ರೈತರು ಪಾವತಿಸಿದ್ದಲ್ಲಿ ರೈತರು ತಮಗಾದ ಬೆಳೆ ನಷ್ಠ ಪರಿಹಾರವನ್ನು ಪಡೆಯಬಹುದು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ಸೂಚಿಸಿದರು.

ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕಡ್ಡಾಯವಾಗಿ ವಿಮೆಯನ್ನು ಮಾಡಿಸಲು ಮುಂದಾಗಬೇಕು. ವಿಮೆ ನೋಂದಣಿಯಿಂದ ಬೋಟ್‌ಗಳಿಗೆ ನಷ್ಠ ಉಂಟಾದಾಗ ಹೆಚ್ಚಿನ ಪರಿಹಾರವನ್ನು ಪಡೆಯಲು ಸಾದ್ಯವಾಗುತ್ತದೆ ಎಂದರು.

ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಸಮುದಾಯದ ಜನರೇ ಹೆಚ್ಚಾಗಿ ಭಾಗಿಯಾಗುವುದರೊಂದಿಗೆ ಹೆಚ್ಚಿನ ಅನಾಹುತಗಳನ್ನು ತಪ್ಪಿಸುತ್ತಾರೆ. ಜಿಲ್ಲಾಡಳಿತವೂ ಸಹ ಕ್ಲಿಷ್ಟಕರ ರಕ್ಷಣಾ ಕಾರ್ಯದಲ್ಲಿ ರಕ್ಷಣಾ ಸಾಮಗ್ರಿಯೊಂದಿಗೆ ತ್ವರಿತವಾಗಿ ಕಾರ್ಯ ಕೈಗೊಳ್ಳಬೇಕು ಎಂದರು.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿ, ಜಿಲ್ಲೆಯಲ್ಲಿ ನೆರೆ ಉಂಟಾದ ಸಂದರ್ಭದಲ್ಲಿ ಆ ತಕ್ಷಣದಲ್ಲೇ ಹೋಗಿ ಸ್ಪಂದಿಸಲು ಉಡುಪಿ ಜಿಲ್ಲಾಡಳಿತವು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ರಾಜ್ಯದಲ್ಲಿಯೇ ಉತ್ತಮ ರೀತಿಯಲ್ಲಿ ರೂಪಿಸಿದೆ. 300 ಕ್ಕೂ ಹೆಚ್ಚು ಆಪದ್ ಮಿತ್ರ ಸ್ವಯಂ ಸೇವಕರಿಗೆ ಹಾಗೂ 180 ಕ್ಕೂ ಹೆಚ್ಚು ನೆಹರು ಯುವಕೇಂದ್ರದ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ ಎಂದರು.

Click Here

Click Here

ಬೆಳೆ ಹಾನಿ ಸಮೀಕ್ಷೆಯನ್ನು ಕೃಷಿ ಹಾಗೂ ಕಂದಾಯ ಇಲಾಖೆಯವರು ಜಂಟಿಯಾಗಿ ಮೊಬೈಲ್ ಆಪ್ ಹಾಗೂ ವೆಬ್‌ಸೈಟ್ ಅನ್ನು ಬಳಸಿ ಸಮೀಕ್ಷೆ ಮಾಡಿ ನಿಖರ ವರದಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಳೆಹಾನಿಯ ಅಂಕಿ ಅಂಶಗಳನ್ನು ಅಧ್ಯಯನ ತಂಡಕ್ಕೆ ತಿಳಿಸುತ್ತಾ ಮಾತನಾಡಿ, ಕಳೆದ ಮಾರ್ಚ್ನಿಂದ ಈವರೆಗೆ ಜಿಲ್ಲೆಯಲ್ಲಿ 2 ಜನ ಮೃತಪಟ್ಟು, 65 ಮನೆಗಳು ಪೂರ್ಣ ಪ್ರಮಾಣದಲ್ಲಿ, 424 ಭಾಗಶಃ ಹಾನಿಯಾಗಿದೆ ಹಾಗೂ 1239.73 ಹೆಕ್ಟೇರ್ ನಷ್ಟು ಬೆಳೆಹಾನಿ ಉಂಟಾಗಿದೆ ಎಂದರು.

ಹೆಚ್ಚಿನ ಮಳೆಯಿಂದಾಗಿ 41.8 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 56.98 ಕಿ.ಮೀ ಜಿಲ್ಲಾ ರಸ್ತೆ, 194 ಕಿ.ಮೀ ನಗರ ಪ್ರದೇಶ ರಸ್ತೆ, 1379.95 ಕಿ.ಮೀ ಗ್ರಾಮೀಣ ರಸ್ತೆ ಹಾಳಾಗಿದೆ. 120 ಕ್ಕೂ ಹೆಚ್ಚು ಸೇತುವೆಗಳು, 1699 ವಿದ್ಯುತ್ ಕಂಬಗಳು ಬಿದ್ದಿವೆ. 335 ಟ್ರಾನ್ಸ್ಫಾರಂ ಹಾಳಾಗಿವೆ. 235 ಶಾಲಾ ಕಟ್ಟಡಗಳು, 78 ಮೀನುಗಾರಿಕಾ ದೋಣಿಗಳು, 90 ಕ್ಕೂ ಹೆಚ್ಚು ಮೀನು ಬಲೆಗಳು ಹಾನಿಯಾಗಿ ಅಂದಾಜು ರೂ. 263.91 ಕೋಟಿಯಷ್ಟು ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ ಎಂದರು.

ಆಗಸ್ಟ್ 5 ರಿಂದ 7 ರವರೆಗೆ 3 ದಿನಗಳ ಕಾಲ ಹೆಚ್ಚಾಗಿ ಮಳೆ ಸುರಿದು ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ ಎಂದ ಅವರು, ಕಡಲ ಕೊರೆತ ತಡೆಗಟ್ಟಲು ಕಡಲ ಕಿನಾರೆಯಲ್ಲಿ ಮುಂಜಾಗ್ರತವಾಗಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಂಡಿದ್ದರೂ ಸಹ ಹೊಸ ಹೊಸ ಜಾಗದಲ್ಲಿ ಕಡಲ ಕೊರೆತ ಉಂಟಾಗಿದೆ ಎಂದರು.

ಜಿಲ್ಲೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ನೆರೆ ಉಂಟಾದಲ್ಲಿ ಎದುರಿಸಲು ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಸರ್ವ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಭೆಯ ನಂತರ ಕೇಂದ್ರ ತಂಡವು ಮಳೆಯಿಂದ ಹಾನಿಗೀಡಾದ ಜಿಲ್ಲೆಯ ಮರವಂತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

Click Here

LEAVE A REPLY

Please enter your comment!
Please enter your name here