ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿ ಕಡಿಮೆ ಅಂಕ ಬಂತೆಂಬ ಕಾರಣಕ್ಕೆ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಸಾಯೀಶ್ ಶೆಟ್ಟಿ ಮೃತದೇಹ ಶುಕ್ರವಾರ ಬೆಳಿಗ್ಗೆ ನಾವುಂದ ಕಾಲೇಜು ಸಮೀಪದ ಅರಬ್ಬೀ ಸಮುದ್ರದಲ್ಲಿ ಪತ್ತೆಯಾಗಿದೆ.
ಹೆಬ್ರಿಯ ನವೋದಯದಲ್ಲಿ ಹತ್ತನೇ ತರಗತಿ ಓದಿದ್ದ ಸಾಯೀಶ್ ಶೆಟ್ಟಿ, ಶಿವಮೊಗ್ಗದಲ್ಲಿ ದ್ವಿತೀಯ ಪಿಯು ಮಾಡುತ್ತಿದ್ದ. ಯಾವುದೇ ಕೋಚಿಂಗ್ ಇಲ್ಲದೇ ನೀಟ್ ಪರೀಕ್ಷೆ ಬರೆದಿದ್ದ. ಮೆಡಿಕಲ್ ಓದಬೇಕು ಎನ್ನುವ ಹಠ ಮನಸ್ಸಿನಲ್ಲಿತ್ತು. ಆರ್ಥಿಕವಾಗಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಬೇಕು ಎನ್ನುವ ಛಲ ಸಾಯೀಶ್ ನಲ್ಲಿತ್ತು. ಆದರೆ ನೀಟ್ ಫಲಿತಾಂಶ ಆತನ ಜೀವನದಲ್ಲಿ ಜಿಗುಪ್ಸೆ ತಂದಿತ್ತು.
ರಘುವೀರ್ ಶೆಟ್ಟಿಯ ಒಬ್ಬನೇ ಗಂಡುಮಗ ಸಾಯೀಶ್ ಮನನೊಂದು ನಿನ್ನೆ ಹೇರಿಕುದ್ರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆಯಿಡೀ ಸಾಯೀಷ್ ಗಾಗಿ ಶೋಧ ನಡೆದಿತ್ತು. ಕೊನೆಗೂ ನಾವುಂದದಲ್ಲಿ ಮೃತ ದೇಹ ಪತ್ತೆಯಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.