ಜಿಲ್ಲಾಧಿಕಾರಿ ಕೂರ್ಮಾರಾವ್ ರಿಂದ ಉದ್ಘಾಟನೆ
ಕುಂದಾಪುರ: 28 ಕುಟುಂಬಗಳಿಗೆ ನಿವೇಶನ, ಕುಡಿಯುವ ನೀರು, ರಸ್ತೆ ಸಿಕ್ಕಿದರೆ ಅದು ಉಡುಪಿ ಜಿಲ್ಲೆಯ ಮಾಜೀ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರ ಪ್ರಾಮಾಣಿಕತೆಗೆ ಸಂದ ಗೌರವ ಎಂದು ವಿಶೇಷ ಸರಕಾರಿ ಅಯೋಜಕರಾದ ಸತೀಶ್ ಕಾಳಾವರ್ಕರ್ ಹೇಳಿದ್ದಾರೆ.
ಅವರು ಕುಂದಾಪುರ ತಾಲೂಕಿನ ಕಂದಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕಂದಾವರ – ಸಟ್ವಾಡಿಯ 2ನೇಯ ವಾರ್ಡಿನಲ್ಲಿ ನಿರ್ಮಾಣಗೊಂಡ ಪ್ರಿಯಾಂಕ ನಗರದ ನಾಮಕರಣ ಸಂದರ್ಭದಲ್ಲಿ ಮಾತನಾಡಿದರು. ಈ ಕಾಲೋನಿಗೆ ಪ್ರಿಯಾಂಕ ನಗರ ಎನ್ನುವ ಹೆಸರಿಟ್ಟಿರುವುದು ಚರಿತ್ರೆಯನ್ನು ನಿರ್ಮಿಸಿದೆ. ಪ್ರಿಯಾಂಕ ಮೇಡಂ ಅವರು ದಲಿತರ ಧ್ವನಿಯಾಗಿದ್ದಾರೆ ಎಂದವರು ಹೇಳಿದರು.
ಪ್ರಿಯಾಂಕ ನಗರ ನಾಮಫಲಕವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಎಮ್. ಅನಾವರಣಗೊಳಿಸಿದರು. ಪ್ರಿಯಾಂಕ ನಗರದ ನೀರು ಮತ್ತು ಬೆಳಕು ಕಾರ್ಯಕ್ರಮವನ್ನು ಕಂದಾವರ ಗ್ರಾ.ಪಂ.ಅಧ್ಯಕ್ಷೆ ಬಾಬಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮತ್ತು ಭೂ ರಹಿತ 28 ಕುಟುಂಬಗಳಿಗೆ ಭೂಮಿ ಕೊಡುವಲ್ಲಿ ಹೊರಟ ಮಾಡಿದ ಕೃಷ್ಣಾ ಸಟ್ವಾಡಿ ಇವರನ್ನು ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ತಹಶಿಲ್ದಾರ ಕಿರಣ್ ಗೌರಯ್ಯ, ಕಂದಾವರ ಗ್ರಾ.ಪಂ.ಉಪಾಧ್ಯಕ್ಷೆ ಶೋಭಾ, ಗ್ರಾ.ಪಂ.ಸದಸ್ಯ ಅಭಿಜಿತ್ ಕೊಠಾರಿ, ಶೀನಾ ಪೂಜಾರಿ, ಗ್ರಾ.ಪಂ.ಮಾಜಿ ಸದಸ್ಯ ಸಂತೋಷ್ ಪೂಜಾರಿ, ಮೋಹನ್ ಚಂದ್ರ ಕಾಳಾವರ್ಕರ್, ಮಂಜು ಸಟ್ವಾಡಿ, ಈಶ್ವರ್ ಸಟ್ವಾಡಿ, ಗ್ರಾ.ಪಂ.ಮಾಜಿ ಸದಸ್ಯೆ ರಾಮು ಮೊದಲಾದವರು ಉಪಸ್ಥಿತರಿದ್ದರು. ಚಂದ್ರ ಕೆ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ರವೀಂದ್ರ ಜಿ.ಬಳ್ಕೂರು ಕಾರ್ಯಕ್ರಮ ನಿರೂಪಿಸಿದರು.