ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬೈಂದೂರು ತಾಲೂಕು ವ್ಯಾಪ್ತಿಯ ಅತ್ಯಂತ ಕುಗ್ರಾಮಗಳಲ್ಲಿ ಒಂದಾದ ಹಳ್ಳಿಹೊಳೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ವಿವಿಧ ಮೂಲಭೂತ ಸೌಕರ್ಯಗಳನ್ನು ಆದ್ಯತೆಯಲ್ಲಿ ಒದಗಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.
ಅವರು ಇಂದು ಹಳ್ಳಿಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆದ, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ, ನೆಟ್‌ವರ್ಕ್ ಸಮಸ್ಯೆ, ಕಾಲುಸಂಕದ ರಚನೆ ಇತ್ಯಾದಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಈ ಭಾಗದವರ ಮುಖ್ಯ ಸಮಸ್ಯೆ ಹಕ್ಕುಪತ್ರವಿಲ್ಲದಿರುವುದು. ಪಹಣಿ ಪತ್ರವಿಲ್ಲದೆ ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದೇವೆ ಎಂದು ಸಾರ್ವಜನಿಕರು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವುದರಿಂದ ಈ ಸಮಸ್ಯೆಯಾಗಿದೆ. ಈ ಕುರಿತು ಸರ್ಕಾರದ ಆದೇಶದಂತೆ ಸೂಕ್ತ ಕ್ರಮವಹಿಸಿ, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಹಳ್ಳಿಹೊಳೆ ಗ್ರಾಮ ಪಂಚಾಯಿತಿಯಿಂದ ತಾಲೂಕು ಕೇಂದ್ರಕ್ಕೆ ತೆರಳಲು ಸೂಕ್ತ ಸಾರಿಗೆ ಸೌಲಭ್ಯವಿಲ್ಲ. ಇದರಿಂದಾಗಿ ಪ್ರತಿನಿತ್ಯ ಶಿಕ್ಷಕರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಯಿತು.
ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 40 ಕುಟುಂಬ ನಿವೇಶನ ರಹಿತವಾಗಿದೆ. ಅವರಿಗೆ ನಿವೇಶನ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ 4 ಎಕ್ರೆ ಸರ್ಕಾರಿ ಜಾಗದ ವ್ಯವಸ್ಥೆಗೊಳಿಸಬೇಕು ಎಂದು ಗ್ರಾಮಸ್ಥರು ಕೋರಿದರು.
ಈ ಭಾಗದಲ್ಲಿ ಸೂಕ್ತ ಸಂಪರ್ಕ ರಸ್ತೆಗಳ ನಿರ್ಮಾಣ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳು, ಶಾಲೆ ಇತ್ಯಾದಿಗಳ ಗಡಿ ಗುರುತಾಗದೆ ಆವರಣವಿಲ್ಲದೆ ಅಭಿವೃದ್ಧಿಗೆ ತೊಡಕಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ಕಾಮಗಾರಿ ನಡೆಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕೊಠಾರಿ ತಿಳಿಸಿದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15.70 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಕೈಗೊಳ್ಳಲು ಅನುದಾನ ಮಂಜೂರಾಗಿದ್ದು, ಮಳೆಯಿಂದಾಗಿ ಕಾಮಗಾರಿಯ ಅನುಷ್ಠಾನ ವಿಳಂಬವಾಗಿದ್ದು, ಶೀಘ್ರದಲ್ಲಿ ಕಾಮಗಾರಿಗಳು ಆರಂಭಗೊಳ್ಳಲಿವೆ. ಈ ಭಾಗದ ಜನರ ಪ್ರಮುಖ ಬೇಡಿಕೆಯಾದ ನಿವೇಶನ ಸೌಲಭ್ಯ ಮತ್ತು 94 ಸಿ ಹಕ್ಕುಪತ್ರ ವಿತರಣೆಯನ್ನು ಆದ್ಯತೆಯಲ್ಲಿ ಒದಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ, ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.