ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ : ಕಬಡ್ಡಿ ಗ್ರಾಮೀಣ ಭಾಗದ ಶಿಸ್ತು ಬದ್ಧ ಆಟ. ಆಟದಲ್ಲಿ ಸೋಲು – ಗೆಲುವಿಗಿಂತಲೂ ಸ್ಪರ್ಧಿಸುವುದೇ ಬಲು ದೊಡ್ಡ ಸಾಧನೆ. ಕ್ರೀಡಾಸ್ಪೂರ್ತಿಯಿಂದ ಆಡಿ, ಸೋಲನ್ನು ಸಹ ಸವಾಲಾಗಿ ಸ್ವೀಕರಿಸಿ ಎಂದು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬುಧವಾರ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ವಿ.ವಿ.ವಿ. ಹೆಮ್ಮಾಡಿ, ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ಹೆಮ್ಮಾಡಿ, ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಘಾಟಿಸಿದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಮಾತನಾಡಿ, ಈ ಮಟ್ಟಕ್ಕೆ ಆಯ್ಕೆಯಾದ ಎಲ್ಲರೂ ಕ್ರೀಡಾಳುಗಳು ಗೆದ್ದಿದ್ದಿರಿ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಸೋತವರು ಕುಗ್ಗದೇ, ಖುಷಿಯಿಂದ ಆಡಿ, ಸಂಭ್ರಮಿಸಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಸಾಧನೆ ಎಂದಿಗೂ ಸಾಧಕರ ಸೊತ್ತು. ಕಠಿನ ಪರಿಶ್ರಮದಿಂದ ಖಂಡಿತ ಯಶಸ್ಸು ನಿಮ್ಮದಾಗುತ್ತದೆ. ಸೋಲೆ ಗೆಲುವಿನ ಸೋಪಾನ ಎಂಬಂತೆ ಆಡಿ. ಕ್ರೀಡೆಯು ಮಾನಸಿಕ ಸ್ಥೈರ್ಯ- ಧೈರ್ಯವನ್ನು ಕೊಡುತ್ತದೆ. ಜೀವನ ಪಾಠವನ್ನು ಕಲಿಸುತ್ತದೆ. ಕಬಡ್ಡಿ, ಖೋಖೋ, ವಾಲಿಬಾಲ್‌ನಂತಹ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚೆಚ್ಚು ಪ್ರೋತ್ಸಾಹ ಸಿಗಬೇಕಿದೆ. ಆಗ ಮಾತ್ರ ಮಮತಾ ಪೂಜಾರಿ, ಅಶ್ವಲ್ ರೈ, ಗುರುರಾಜ್ ಅವರಂತಹ ಪ್ರತಿಭೆಗಳು ವಿಶ್ವಮಟ್ಟದಲ್ಲಿ ಮಿಂಚಲು ಸಾಧ್ಯ ಎಂದವರು ಹೇಳಿದರು.
ಹೆಮ್ಮಾಡಿ ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮಂಜು ಕಾಳಾವರ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ ಮಾತನಾಡಿದರು.
ಕುಂದಾಪುರ ತಾ| ಕ್ರೀಡಾ ಸಂಯೋಜಕ ರಾಮ ಶೆಟ್ಟಿ, ಆಡಳಿತ ಮಂಡಳಿ ಉಪಾಧ್ಯಕ್ಷ ಡಾ| ಮಂಜುನಾಥ ಗಾಣಿಗ, ಕಾರ್‍ಯದರ್ಶಿ ಸುನಿಲ್ ಚಿತ್ತಾಲ್, ಕೋಶಾಧಿಕಾರಿ ಕಾರ್ತಿಕೇಯ ಎಂ.ಎಸ್., ಆಡಳಿತಾಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ.ಕಾಲೇಜಿನ ವಸಂತ ಕುಮಾರ್ ಶೆಟ್ಟಿ, ಕೋಟ ವಿವೇಕ ಪ.ಪೂ.ಕಾಲೇಜಿನ ನಾಗರಾಜ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಕಾರ್ಕಳ ಹಾಗೂ ಹೆಬ್ರಿ ವಲಯದ ಬಾಲಕ-ಬಾಲಕಿಯರ ತಂಡಗಳು ಪಾಲ್ಗೊಂಡಿದ್ದವು.
ಆಡಳಿತ ಮಂಡಳಿಯ ಅಧ್ಯಕ್ಷ ಅಧ್ಯಕ್ಷ, ಪ್ರಾಂಶುಪಾಲ ಗಣೇಶ ಮೊಗವೀರ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪನ್ಯಾಸಕ ಉದಯ ನಾಯ್ಕ್ ಕಾರ್‍ಯಕ್ರಮ ನಿರೂಪಿಸಿ, ಪ್ರಿಯಾಂಕ ವಂದಿಸಿದರು.