ರೈತ ಸಿರಿ ಅಗ್ರಿಮಾಲ್ ಯೋಜನೆ, ಕೋರ್ಟ್ ಆದೇಶದಂತೆ ಕಾಮಗಾರಿ
ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ 45ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಇಲ್ಲಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಜರುಗಿತು.
Video:
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು 45 ವರ್ಷಗಳುದ್ದಕ್ಕೆ ಏರುಗತಿಯ ಪ್ರಗತಿಯನ್ನು ದಾಖಲಿಸುತ್ತ ಬಂದಿದೆ. ವರದಿ ವರ್ಷದಲ್ಲಿ ರೂ.853 ಕೋಟಿ ವ್ಯವಹಾರ ನಡೆಸಿ, ರೂ 4.69 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಸಂಘವು ವರ್ಷದಲ್ಲಿ ರೂ. 193.47 ಕೋಟಿ ಠೇವಣಿ ಸಂಗ್ರಹಿಸಿ, ರೂ. 161.46 ಕೋಟಿ ಸಾಲ ನೀಡಿದೆ. ವಿವಿಧ ಸಂಸ್ಥೆಗಳಲ್ಲಿ ರೂ. 82.08 ಕೋಟಿ ಹೂಡಿಕೆ ಮಾಡಿದೆ. ರೂ.27.02 ಕೋಟಿ ನಿಧಿಗಳು, ರೂ.2.26 ಕೋಟಿ ಪಾಲು ಬಂಡವಾಳ ಹೊಂದಿದೆ. ರೂ.16.88 ಕೋಟಿ ಕೃಷಿ ಸಾಲ, 7.96 ಕೋಟಿ ರೈತ ಸಿರಿ ಸ್ವ-ಸಹಾಯ ಗುಂಪುಗಳ ಸಾಲ ನೀಡಲಾಗಿದೆ ಎಂದರು.
ತಾಲೂಕು ವ್ಯಾಪ್ತಿಗೆ ಸಾಲ ಸೌಲಭ್ಯ ಸಹಿತ ಸಂಘದ ಸೇವೆಯನ್ನು ವಿಸ್ತರಣೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಉದ್ದೇಶಿತ ರೈತಸಿರಿ ಅಗ್ರಿಮಾಲ್ ಯೋಜನೆಗೆ ಪ್ರಾಥಮಿಕ ಹಂತದ ಫೈಲ್ ಫೌಂಡೇಶನ್ ಕಾಮಗಾರಿ ನಡೆಸಿದ್ದು, ಉಚ್ಛ ನ್ಯಾಯಲಯದ ಆದೇಶ ಹಾಗೂ ಸಹಕಾರ ಇಲಾಖೆಯ ನಿಬಂಧನೆಗಳಿಗೆ ಒಳಪಟ್ಟು ಮುಂದಿನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದರು.
ಸಭೆಯಲ್ಲಿ ಸಂಘದ ಸದಸ್ಯರಾದ ನವೀನಚಂದ್ರ ಉಪ್ಪುಂದ, ರವಿಚಂದ್ರ ಉಪ್ಪುಂದ ಹಾಗೂ ಮಧುಸೂದನ ಹೆಬ್ಬಾರ್, ಮೋಹನಚಂದ್ರ, ಐ ನಾರಾಯಣ ಮೊದಲಾದವರು ವಿವಿಧ ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭ ಸಂಘದ 24 ಮಂದಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡ್, ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಕೆ. ಮೋಹನ ಪೂಜಾರಿ, ಬಿ. ಎಸ್. ಸುರೇಶ ಶೆಟ್ಟಿ, ಗುರುರಾಜ್ ಹೆಬ್ಬಾರ್, ವೀರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ್, ದಿನಿತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಪ್ರಬಂಧಕ ಚಂದಯ್ಯ ಶೆಟ್ಟಿ ವಂದಿಸಿದರು.