ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ ನಾಲ್ಕು ವರ್ಷಗಳಲ್ಲಿ ಬೈಂದುರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳು ನಿರೀಕ್ಷೆಗೂ ಮೀರಿ ಅಭಿವೃದ್ದಿ ಸಾಧಿಸಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಬುಧವಾರ ಚಿತ್ತೂರು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾದ ಬೈಂದೂರು ವಿಧಾನಸಭಾ ಕ್ಷೇತ್ತದ ವಂಡ್ಸೆ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ತೂರು ಗ್ರಾ.ಪಂ. ಒಳ್ಳೆಯ ಆಡಳಿತ ಹೊಂದಿರುವ ಪಂಚಾಯತ್. 13ಕೋಟಿ 36ಲಕ್ಷ ರೂಪಾಯಿಗಳ ಅನುದಾನ ಈ ಗ್ರಾ.ಪಂಚಾಯತ್ ಗೆ ನೀಡಲಾಗಿದೆ. ಕಳೆದ 4ವರ್ಷದಲ್ಲಿ ಚಿತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನಷ್ಟು ಅನುದಾನ ನೀಡಲು ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರಧಾನಿ ಮೋದಿಯವರ ಆಶಯದಂತೆ ವಿದ್ಯುತ್ ವಂಚಿತರ ಮನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡುವ ಕೆಲಸ ಮಾಡಿದ್ದೇವೆ ಎಂದರು. ಭೂಮಿ ವಂಚಿತರಾದವರಿಗೆ 94c ಅಡಿಯಲ್ಲಿ ಅರ್ಹರಿಗೆ ಭೂಮಿ ನೀಡಲು ಪ್ರಯತ್ನ ಮಾಡುತ್ತೆನೆ. ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆ, ಅಕ್ರಮ ಸಕ್ರಮ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳಿಗೆ ಭೂಮಿ ನೀಡುವ ಕೆಲಸ ಮಾಡುತ್ತೇನೆ. ಎಲ್ಲಾ ಇಲಾಖೆಗಳು ಜನರಿಗಾಗಿ ಕೆಲಸ ಮಾಡಬೇಕು. ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅವರ ನೋವನ್ನು ಅರ್ಥ ಮಾಡಿಕೊಂಡು ಸಮಸ್ಯೆ ಬಗೆಹರಿಸಬೇಕು ಎಂದರು.
ಬೆಳ್ಳಾಲದಿಂದ ಕೊಲ್ಲೂರಿಗೆ ಶಾಲಾ ಸಮಯದಲ್ಲಿ ಮಕ್ಕಳಿಗೆ ಸಂಚರಿಸಲು ಸರಕಾರಿ ಬಸ್ ಬೇಡಿಕೆ ಇಟ್ಟಾಗ ಸ್ಪಂದಿಸಿದ ಶಾಸಕ ತಕ್ಷಣ ಸಂಬಂಧ ಪಟ್ಟ ಅಧಿಕಾರಿಯೊಂದಿಗೆ ಮಾತನಾಡಿ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡಲಾಗುವುದು ಎಂದರು. ಹಾರ್ಮಣ್ – ಕೊಲ್ಲೂರು ರಸ್ತೆಗೆ ದಾರಿದೀಪದ ವ್ಯವಸ್ಥೆ ಮಾಡಲಾಗುವುದು. ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಜಿಪಿಎಸ್ ಸಮಸ್ಯೆ ಸರಿಪಡಿಸಿ ಮನೆ ಕಟ್ಟಲು ಹಣ ಬಿಡುಗಡೆ ಮಾಡುವುದು ಎಂದರು. ಚಿತ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿರುವ ವೋಲ್ಟೇಜ್ ಸಮಸ್ಯೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಬಳಿಕ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ವಿತರಿಸಲಾಯಿತು.
ಚಿತ್ತೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ದಿವಾಕರ್ ಆಚಾರ್ಯ, ಕುಂದಾಪುರ ತಹಸೀಲ್ದಾರ್ ಕಿರಣ್ ಗೌರಯ್ಯ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮುಖಂಡರಾದ ಅತುಲ್ ಕುಮಾರ್ ಶೆಟ್ಟಿ, ಮಂಜಯ್ಯ ಶೆಟ್ಟಿ, ಮಾರಣ ಕಟ್ಟೆ ದೇವಸ್ಥಾನದ ಪ್ರದಾನ ಅರ್ಚಕ ರಾಮಚಂದ್ರ ಮಂಜ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕಂದಾಯ ಅಧಿಕಾರಿ ರಾಘವೇಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ರವಿ ಶೆಟ್ಟಿ ವಂದಿಸಿದರು.