ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತ ಪ್ರಕರಣ ಇಡೀ ಸರಕಾರ ಮತ್ತು ನಮಗೆ ಮಾಡಿದ ಅವಮಾನವಾಗಿದ್ದು, ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾದರೂ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಗುತ್ತಿಗೆದಾರರು ಗಮನಹರಿಸಬೇಕಿದ್ದು, ಕಳಪೆ ಕಾಮಗಾರಿ ನಡೆಸಿದ್ದು ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಬ್ಲ್ಯಾಕ್‍ಲಿಸ್ಟ್‍ಗೆ ಸೇರಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವ ಎಸ್.ಅಂಗಾರ ಹೇಳಿದರು.
ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಅವರು ಜೆಟ್ಟಿ ಕುಸಿತ ಪ್ರದೇಶವನ್ನು ವೀಕ್ಷಿಸಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಜೆಟ್ಟಿ ಕುಸಿತದಿಂದ ಮೀನುಗಾರಿಕೆಗೆ ತೊಂದರೆಯಾಗದಂತೆ ಆದಷ್ಟು ಶೀಘ್ರ ಜೆಟ್ಟಿ ಪುನರ್ ನಿರ್ಮಾಣ ಮಾಡಲು ಸರಕಾರ ಕ್ರಮಕೈಗೊಳ್ಳಲಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಬೇರೆ ಬೇರೆ ಯೋಜನೆಗಳು ಬಂದಾಗ ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆದುಕೊಂಡ ಬಳಿಕವಷ್ಟೇ ಬೇರೆ ಬೇರೆ ಬಂದರುಗಳಿಗೆ ಅನುದಾನ ನೀಡಲಾಗುತ್ತಿದೆ. ಎಂದು ಹೇಳಿದರು. ಪುಣೆಯ ಸಿಡಬ್ಲ್ಯುಪಿಆರ್‍ಎಸ್ ಸಂಸ್ಥೆಯ ಬದಲು ಬೆಂಗಳೂರಿನ ಖಾಸಗಿ ಸಂಸ್ಥೆಯವರು ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯ ವಿನ್ಯಾಸ ಮಾಡಿದ ಬಗ್ಗೆ ಕೇಳಿ ಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ವಿವಿಧ ಸಂಸ್ಥೆಗಳು ಬೇರೆ ಬೇರೆ ತಾಂತ್ರಿಕತೆ ಬಗ್ಗೆ ವಿನ್ಯಾಸ ನೀಡುತ್ತಿದ್ದು, ನೀಡಿದ ವಿನ್ಯಾಸದಲ್ಲಿ ಲೋಪ ಕಂಡು ಬಂದಲ್ಲಿ ಕ್ರಮಕೈಗೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸರಕಾರ ಸಿದ್ಧವಿದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಡಿದ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ರಾಜಕೀಯಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು ಕಮೀಷನ್ ಪಡೆದಿದ್ದಾರೆ, ಎಷ್ಟು ಪಡೆದಿದ್ದಾರೆ ಎಂಬುದನ್ನು ಸಿದ್ಧರಾಮಯ್ಯ ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಮೀಷನ್ ವ್ಯವಹಾರ ಇರಲಿಲ್ಲವಾ?, ಕಾಂಗ್ರೆಸ್ ಆಡಳಿತದಲ್ಲಿ ಹಗರಣಗಳು, ಭ್ರಷ್ಟಾಚಾರ ನಡೆದಿರಲಿಲ್ಲವೇ ಎಂದು ಪ್ರಶ್ನಸಿದ ಅವರು ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಸಿದ್ಧರಾಮಯ್ಯ ಹಾಗೂ ಕಾಂಗ್ರೆಸಿಗರು ಹತಾಶರಾಗಿ ಈ ರೀತಿಯ ಟೀಕೆಗಳನ್ನು ಮಾಡುತ್ತಿದ್ದು ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಅವರ ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ ಅವರು, ಜೆಟ್ಟಿ ಕುಸಿದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
12 ಕೋಟಿ ರೂ. ವೆಚ್ಚದ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯಲ್ಲಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಯಾವ ಹಂತದಲ್ಲಿ ಎಷ್ಟೆಷ್ಟು ಬಿಲ್ಲು ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು. ಜೆಟ್ಟಿ ಕುಸಿತವನ್ನು ಲೋಕಾಯುಕ್ತ ತನಿಖೆ ನಡೆಸಬೇಕೆಂಬ ಸ್ಥಳೀಯ ಮೀನುಗಾರರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮವಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಇಂಜಿನಿಯರ್ ಶ್ರೀನಿವಾಸ ಮೂರ್ತಿ, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಪಿ.ನಾಗರಾಜ್, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾದ ಗಣೇಶ, ಉದಯಕುಮಾರ್, ಸುಮಲತಾ, ದಿವಾಕರ ಖಾರ್ವಿ, ಉಪನಿರ್ದೇಶಕ ಕುಮಾರಸ್ವಾಮಿ, ಕುಂದಾಪುರ ಡಿವೈಎಸ್‍ಪಿ ಶ್ರೀಕಾಂತ್, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಮೀನುಗಾರ ಸಂಘಟನೆಗಳ ಮುಖಂಡರು, ಮೀನುಗಾರರು ಉಪಸ್ಥಿತರಿದ್ದರು.