ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ: ಹನ್ನೆರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಂಗೊಳ್ಳಿ ಜೆಟ್ಟಿ ಕುಸಿತಗೊಂಡ ಪರಿಣಾಮ ಸುಮಾರು ಹತ್ತು ಕೋಟಿ ರೂಪಾಯಿ ಸಮುದ್ರಪಾಲಾಗಿದ್ದು, ಇದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದ್ದಾರೆ.
ಕುಸಿತಗೊಂಡ ಗಂಗೊಳ್ಳಿ ಜೆಟ್ಟಿ ನಿರ್ಮಾಣ ಪ್ರದೇಶಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದ ಜೊತೆ ಮಾತನಾಡಿದರು.
ಸಾಮಾನ್ಯವಾಗಿ ಇಂತಹ ಕಾಮಗಾರಿಗಳ ವಿನ್ಯಾಸವನ್ನು ಪುಣೆಯ ಸಿಡಬ್ಲ್ಯುಪಿಆರ್‍ಎಸ್ ಸಂಸ್ಥೆಗೆ ವಹಿಸಲಾಗುತ್ತದೆ. ಆದರೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಕಮಿಷನ್ ಆಸೆಗೆ ಬೆಂಗಳೂರಿನ ಕಂಪೆನಿಗೆ ಕೆಲಸ ವಹಿಸಿದೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆಯಾಗಿದೆ. ಘಟನೆ ನಡೆದು ಎರಡು ದಿನವಾದರೂ ಸ್ಥಳೀಯ ಶಾಸಕರೂ ಸ್ಥಳಕ್ಕೆ ಭೇಟಿ ನೀಡಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದವರು ಹೇಳಿದರು.
ಜೆಟ್ಟಿ ಕುಸಿತಕ್ಕೆ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಹೊಣೆ ಮಾಡಬೇಕು. ಇಂಜಿನಿಯರ್‍ನ್ನು ತಕ್ಷಣವೇ ಅಮಾನತುಗೊಳಿಸಿ ಕಾಮಗಾರಿಯ ತನಿಖೆಗೆ ಆದೇಶಿಸಬೇಕು ಎಂದವರು ಆಗ್ರಹಿಸಿದರು. ಟೆಂಡರ್ ಪ್ರಕ್ರಿಯೆಯಲ್ಲಿಯೂ ಅವ್ಯವಹಾರ ನಡೆದಿರುವ ಶಂಕೆಯಿದ್ದು ಆ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಅವರು, ತಕ್ಷಣವೇ ಹೊಸ ಕಾಮಗಾರಿಗೆ ರೂಪುರೇಷೆ ಸಿದ್ಧಪಡಿಸಿ ಮೀನುಗಾರಿಕೆಗೆ ಅನುಕೂಲ ಕಲ್ಪಿಸಬೇಕು ಎಂದರು.
ಸ್ಥಳೀಯ ಮುಖಂಡರಾದ ದುರ್ಗರಾಜ್ ಪೂಜಾರಿ, ಮಂಜುಳಾ ದೇವಾಡಿಗ, ಪ್ರೀತಿ ಫೆರ್ನಾಂಡಿಸ್, ಜಹೀರ್ ನಾಕುದಾ, ಗಂಗೊಳ್ಳಿ ಗ್ರಾಪಂ ಸದಸ್ಯ ದೇವು ಶಿಪಾೈ ಮತ್ತಿತರರು ಉಪಸ್ಥಿತರಿದ್ದರು.