ಕುಂದಾಪುರ ಮಿರರ್ ಸುದ್ದಿ…
ಕೋಟ: ನಮ್ಮಲ್ಲಿ ಯುವ ಶಕ್ತಿ ಇದ್ದರೂ, ಇದರ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡಿದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಕೋಟ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಕೋಟದ ವಿ ಶೈನ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಡೆದ ರಿಸರ್ವ್ ಪೊಲೀಸ್ ಕಾನ್ ಸ್ಟೇಬಲ್ ಮತ್ತು ಅಗ್ನಿಪಥ್ ಕಾರ್ಯಕ್ರಮದ ಅಗ್ನಿವೀರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯ ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿವುದು ಕಡಿಮೆ. ವೈದಕೀಯಕ್ಷೇತ್ರ, ಇಂಜಿನಿಯರ್ ಕನಸನ್ನು ಕಾಣುವುದನ್ನು ಬಿಟ್ಟು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತೇರ್ಗಡೆ ಹೊಂದಿ ದೇಶದ ಪ್ರಗತಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭ ನಿವೃತ್ತ ಸೇನಾನಿ ಹಾಗೂ ಅಗ್ನಿಪಥ್‍ನ ತರಬೇತುದಾರ ತೆಕ್ಕಟ್ಟೆ ರವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವಿ ಶೈನ್ ಮುಖ್ಯಸ್ಥ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಳೆದ 20ವರ್ಷಗಳಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಕೊರತೆಯಿರುವುದನ್ನು ಮನಗಂಡು ವಿ ಶೈನ್ ಕಳೆದ 5 ವರ್ಷಗಳಿಂದ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದು ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸರ್ಕಾರೀ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. 2016ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಗಳ ತರಬೇತಿ ಪಡೆದು 15ಕ್ಕೂ ಮಿಕ್ಕಿದ ಅಭ್ಯರ್ಥಿಗಳು ಉದ್ಯೋಗ ಪಡೆಯುವುದು ಸಾಧ್ಯವಾಗಿದೆ ಎಂದರು.
ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವಡ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ, ವಕೀಲ ಅಲ್ತಾರ್ ಗೌತಮ್ ಹೆಗ್ಡೆ, ಭಂಡಾರಕಾರ್ಸ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ರೇಖಾ.ಬಿ ಬನ್ನಾಡಿ, ಹೋಮ್ ಗಾಡ್ಸ್ನ ಪ್ತಶಾಂತ್ ಶೆಟ್ಟಿ, ಕುಂದಾಪುರ ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಉದ್ಯಮಿ ಎಂ.ಸುಬ್ರಾಯ ಆಚಾರ್ಯ, ಡಿ.ಆರ್.ಎಫ್ ನಾಗೇಶ್ ಬಿಲ್ಲವ ಇದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಪ್ತ ಕಾರ್ಯದರ್ಶಿ ವಿವೇಕ ಅಮೀನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಹರೀಷ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಿ.ಡಿ.ಓ ಗಿರೀಶ್ ಕುಮಾರ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.ಪ್ರಸಾದ್ ಬಿಲ್ಲವ ಸಹಕರಿಸಿದರು.