ಕುಂದಾಪುರ ಮಿರರ್ ಸುದ್ದಿ…
ಕೊಲ್ಲೂರು: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಶರನ್ನವರಾತ್ರಿಯ ಅಂಗವಾಗಿ ಮಧ್ಯಾಹ್ನ 1.50 ಕ್ಕೆ ನಡೆದ ಶ್ರೀ ದೇವಿಯ ವೈಭವದ ರಥೋತ್ಸವ ನಡೆಯಿತು.
ನವರಾತ್ರಿ ಪ್ರಾರಂಭವಾದ ದಿನದಿಂದ ಮಹಾನವಮಿಯ ತನಕವೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ದೇಗುಲದಿಂದ ಹೊರಕ್ಕೆ ತರಲಾದ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ ಹಾಗೂ ಬಲಿ ಸೇವೆ ನಡೆದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.
Video:
ದೇವಸ್ಥಾನದ ತಂತ್ರಿಗಳು ಶ್ರೀ ದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆಯ ನಡೆಸಲಾಯಿತು. ನಂತರ ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು. ದೇವಳದ ಒಳ ಪ್ರಾಂಗಣದಲ್ಲಿ ಮೂರು ಸುತ್ತು ರಥ ಕ್ರಮಿಸಿತು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹಾಗೂ ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಜಿ ಟ್ರಸ್ಟಿಗಳು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಕೋವಿಡ್ ಬಳಿಕ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವಕ್ಕೆ ವಿವಿಧ ಭಾಗಗಳಲ್ಲಿ ಸಾಹಸ್ರಾರು ಸಂಖ್ಯೆಯಲ್ಲಿ ಭಕ್ತಕೋಟಿ ಹರಿದು ಬಂದಿತ್ತು. ಭಕ್ತಾಭಿಮಾನಿಗಳ ನೂಕುನುಗ್ಗಲು ಏರ್ಪಟ್ಟಿತು. ಸಾಕಷ್ಟು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅತ್ಯಂತ ಯಶಸ್ವಿಯಾಗಿ ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು.
ಬುಧವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಪುಟಾಣಿಗಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ ಹಾಗೂ ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಲಿದೆ.