ಕುಂದಾಪುರ ಮಿರರ್ ಸುದ್ದಿ
ಕುಂದಾಪುರ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರಿಂದ ಸರ್ವೀಸ್ ರಸ್ತೆಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ನಡೆದಿದ್ದ ಹೋರಾಟಕ್ಕೆ ಶಾಶ್ವತ ಪರಿಹಾರ ದೊರಕಿದೆ.
ಸರ್ವೀಸ್ ರಸ್ತೆಯಲ್ಲಿರುವ ಎಲ್.ಐ.ಸಿ ರಸ್ತೆ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ತೆರವುಗೊಳಿಸಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶನಿವಾರ ಡಾಮರೀಕರಣದ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಹೆದ್ದಾರಿಯಿಂದ ಕುಂದಾಪುರ ನಗರ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದಂತಾಗಿದೆ. ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಎರಡು ವರ್ಷಗಳಿಂದ ಹೆದ್ದಾರಿಯಿಂದ ಸರ್ವೀಸ್ ರಸ್ತೆ ಕಲ್ಪಿಸುವ ಬಗ್ಗೆ ಹೋರಾಟ ನಡೆಯುತ್ತಿತ್ತು. ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಹೆದ್ದಾರಿ ಸಂಪರ್ಕದ ರೂಪು ರೇಷೆ ಸಿದ್ಧಪಡಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಸದೆ ಶೋಭಾ ಕರಂದ್ಲಾಜೆ ಜೊತೆಗೆ ಮಾತುಕತೆ ನಡೆಸಿದ್ದರು. ಸಂಸದೆ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದು ಈ ಕಾಮಗಾರಿ ನಡೆಸಲಾಗಿದೆ ಎಂದು ಬಿಜೆಪಿ ಯುವ ನಾಯಕ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ತಿಳಿಸಿದ್ದಾರೆ. ಆದರೆ ಸರ್ವೀಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಕ್ಕೆ ಅನುಕೂಲವಿಲ್ಲದೇ ಇರುವುದರಿಂದ ಯಾವ ಪ್ರಯಾಣಿಕರು ಹೆದ್ದಾರಿ ಪ್ರವೆಶಿಸಬಾರದು ಎಂದು ನಾಮಫಲಕ ಅಳವಡಿಸಲಾಗಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಬಿಜೆಪಿ ನಾಯಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.