ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೊರೋನಾ ಮೊದಲು ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ತಾಲೂಕು ಆಸ್ಪತ್ರೆಗಳ ಪೈಕಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಆಸ್ಪತ್ರೆ ರಾಜ್ಯದಲ್ಲೆ ಉತ್ತಮವಾಗಿದೆ ಎಂಬ ಹೆಗ್ಗಳಿಕೆ ನಡುವೆ ಇಲ್ಲಿನ ಅಗತ್ಯತೆ ಮನಗಂಡು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮುತುವರ್ಜಿಯಿಂದ ಸುಸಜ್ಜಿತ ಆಕ್ಸಿಜನ್ ಫ್ಲಾಂಟ್ ನಿರ್ಮಾಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ.
ಕೋವಿಡ್ ಚಿಕಿತ್ಸೆಯಲ್ಲಿ ಮುಂಚೂಣಿ ಆಸ್ಪತ್ರೆ…
ಕೊರೋನಾ ಎರಡೂ ಅಲೆಗಳ ಸಂದರ್ಭ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಂದು ಭಾಗವನ್ನು ಬಹುತೇಕ ಕೋವಿಡ್ ಆಸ್ಪತ್ರೆಯನ್ನಾಗಿಸಲಾಗಿತ್ತು. ಬಹುತೇಕ ಮೊದಲಿನಿಂದಲೂ ಆಕ್ಸಿಜನ್ ಕೊರತೆ ನೀಗಿಸುವಲ್ಲಿ ಇಲ್ಲಿನ ವೈದ್ಯಾಧಿಕಾರಿಗಳ ನೇತೃತ್ವದ ತಂಡ ರಾತ್ರಿಹಗಲನ್ನೆದೆ ಕೆಲಸ ಮಾಡಿದ್ದರೂ ಕೂಡ ತಜ್ಞರ ವರದಿಯಂತೆ ಮೂರನೇ ಅಲೆಯ ಸಂಭವ್ಯದ ಹಿನ್ನೆಲೆ ಸಂಪೂರ್ಣ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನಿವಾರಣೆಗೆ 60 ಲಕ್ಷ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವೈದ್ಯಕೀಯ ಆಮ್ಲಜನಕ ಘಟಕ ಅಥವಾ ಮೆಡಿಕಲ್ ಆಕ್ಸಿಜನ್ ಫ್ಲಾಂಟ್ ನಿರ್ಮಿಸಲಾಗಿದೆ.
ಏನಿದು ಆಕ್ಸಿಜನ್ ಫ್ಲಾಂಟ್…
ವಾತಾವರಣದಲ್ಲಿರುವ ಗಾಳಿಯಲ್ಲಿ ಆಮ್ಲಜನಕ ಸಹಿತ ನೈಟ್ರೋಜನ್ ಹಾಗೂ ಇತರ ಅನಿಲಗಳಿರುತ್ತದೆ. ಆ ಗಾಳಿಯಿಂದ ಶುದ್ಧ ಆಮ್ಲಜನಕವನ್ನು ಬೇರ್ಪಡಿಸಿ ಶುದ್ಧ ಆಮ್ಲಜನಕವನ್ನು ಘಟಕಕ್ಕೆ ಸೇರಿಸುವ ಮೂಲಕ ಅದನ್ನು ವೈದ್ಯಕೀಯ ಉಪಯೋಗಕ್ಕೆ ಬಳಸಲಾಗುತ್ತದೆ. ನಿಮಿಷಕ್ಕೆ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಒದಗಿಸುವ ಫ್ಲಾಂಟ್ ಇದಾಗಿದೆ. ವಾತಾವರಣದಿಂದ ಗಾಳಿಯಿಂದ ಬೇರ್ಪಡಿಸಿದ ಶುದ್ಧ ಆಕ್ಸಿಜನ್ ಸಂಗ್ರಹ ಘಟಕಕ್ಕೆ ಹೋಗಿ ಮೆನಿಪೋಲ್ಡ್ ಮೂಲಕವಾಗಿ ಅಗತ್ಯವಿರುವ ಪ್ರತಿ ಬೆಡ್’ಗೆ ಪೂರೈಕೆಯಾಗಲಿದೆ. ಈ ಮೊದಲು ಜಂಬೋ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿದ್ದು ಈಗ ಇಲ್ಲೇ ಆಮ್ಲಜನಕ ಉತ್ಪಾದನೆಯಾಗುವ ಹಿನ್ನೆಲೆ ಅಮ್ಲಜನಕ ಕೊರತೆಯ ಪ್ರಮೇಯ ಇರುವುದಿಲ್ಲ ಎಂದು ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ರಾಬರ್ಟ್ ರೆಬೆಲ್ಲೋ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ 2 ಕಡೆ ಗೇಲ್ ಸಂಸ್ಥೆಯಿಂದ ಫ್ಲಾಂಟ್ ನಿರ್ಮಾಣ…
ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ ಘಟಕವನ್ನು ನಿರ್ಮಿಸಲು (ಪಿಎಸ್ಎ ಫ್ಲಾಂಟ್) ಗೇಲ್ ಎನ್ನುವ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದ್ದು ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ನೋಯ್ಡಾ ಮೂಲದ ಮಾಲೆಸ್ಸಿವ್ ಕಂಪೆನಿ ನೋಡಿಕೊಳ್ಳಲಿದೆ. ಗೇಲ್ ಸಂಸ್ಥೆ ದೇಶದಲ್ಲಿ ಒಟ್ಟು 12 ಕಡೆ ಈ ಆಕ್ಸಿಜನ್ ಫ್ಲಾಂಟ್ ನಿರ್ಮಾಣ ಜವಬ್ದಾರಿ ಪಡೆದಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಘಟಕ ನಿರ್ಮಿಸಿದೆ.
ಸಾಮೂಹಿಕ ಪರಿಶ್ರಮ…
ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ರಾಬರ್ಟ್ ರೆಬೆಲ್ಲೋ ಹಾಗೂ ಕೋವಿಡ್ ನೋಡಲ್ ವೈದ್ಯಾಧಿಕಾರಿ ಡಾಕ್ಟರ್ ನಾಗೇಶ್ ನೇತೃತ್ವದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಅವಿರತ ಶ್ರಮ ವಹಿಸುತ್ತಿದೆ. ಉಡುಪಿ ಜಿಲ್ಲಾಡಳಿತ, ಕುಂದಾಪುರ ತಾಲ್ಲೂಕು ಆಡಳಿತ, ಜಿಲ್ಲಾಆರೋಗ್ಯ ಇಲಾಖೆ ಇವರಿಗೆ ಬೆನ್ನೆಲುಬಾಗಿ ನಿಂತಿದೆ. ಡಿಸಿ ಜಿ. ಜಗದೀಶ್, ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ಅಂದಿನ ಕುಂದಾಪುರ ತಾಲೂಕು ವೈದ್ಯಾಧಿಕಾರಿ ಪ್ರಸ್ತುತ ಉಡುಪಿ ಡಿ.ಎಚ್.ಒ ನಾಗಭೂಷಣ್ ಉಡುಪ, ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೂಡ ಅಗತ್ಯ ಸಲಹೆ ಸಹಕಾರದ ಜೊತೆ ಅಗತ್ಯ ಉಪಕರಣಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದರು. ಇಲ್ಲಿಗೆ ಆಕ್ಸಿಜನ್ ಫ್ಲಾಂಟ್ ನಿರ್ಮಾಣದ ಹಿಂದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಶ್ರಮ ಬಹಳಷ್ಟಿತ್ತು ಎನ್ನುವುದು ಉಲ್ಲೇಖನೀಯ.