ನಟ, ನಿರ್ದೇಶಕ ಡಾ.ರಮೇಶ ಅರವಿಂದ್ ಅವರಿಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
ಕುಂದಾಪುರ ಮಿರರ್ ಸುದ್ದಿ…
ಕೋಟ :ಶಿವರಾಮ ಕಾರಂತರು ಒಬ್ಬ ವ್ಯಕ್ತಿ ಯಾಗಿರದೇ ನಡೆದಾಡುವ ವಿಶ್ವಕೋಶ ಹಾಗೂ ವಿಶ್ವ ವಿದ್ಯಾನಿಲಯ ಆಗಿದ್ದರು. ಸಾಹಿತಿಯಾಗಿ ಎಲ್ಲಾ ಕ್ಷೇತ್ರಗಳನ್ನು ಅರಿತು ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಎಂದು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕೋಟತಟ್ಟು ಗ್ರಾಪಂ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಕೋಟ ಶಾಂಭವಿ ಶಾಲಾ ವಠಾರದಲ್ಲಿ ಸೋಮವಾರ ಆಯೋಜಿಸಲಾದ ಡಾ.ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರಂತರು ಅಂದರೆ ನಿಖರ ಹಾಗೂ ಸ್ಪಷ್ಟ. ಭಾಷೆ ಬೆಳೆದರೆ ಸಂಸ್ಕೃತಿ ಬೆಳೆಯುತ್ತದೆ. ಕಾರಂತರು ಭಾಷೆಯನ್ನು ಬೆಳೆಸುವ ಮೂಲಕ ಮಾರ್ಗದರ್ಶಕರಾಗಿದ್ದರು, ಅವರ ಸಾಹಿತ್ಯ ರಾಜ್ಯದ ಇತಿಹಾಸಕ್ಕೆ ಭಾಷೆ, ಕಲೆ, ಸಂಸ್ಕೃತಿ ದೊಡ್ಡ ಕಾಣಿಕೆ ನೀಡಿದೆ ಎಂದರು.
ಕನ್ನಡ ಭಾಷೆ ಶ್ರೀಮಂತ ಹಾಗೂ ಸಂಪದ್ಭರಿತಗೊಳ್ಳಲು ಕಡಲ ತೀರದ ಜನರ ಕೊಡುಗೆ ಅಪಾರವಾಗಿದ್ದು, ಸೇಡಿಯಾಪು ಕೃಷ್ಣಭಟ್ಟ ರಿಂದ ಶಿವರಾಮ ಕಾರಂತ ರೂ ಸೇರಿದಂತೆ ಹಲವರ ಕೊಡುಗೆ ಅಪಾರವಾದುದು ಎಂದರು.
ಕಲಾವಿದರು ತಮ್ಮ ಅಭಿನಯ ಕಲೆಯ ಮೂಲಕ ಜನರ ಮನಸ್ಸಿನ ದುಗುಡವನ್ನು ಕಡಿಮೆಗೊಳಿಸುತ್ತಾರೆ, ನಟ ರಮೇಶ್ ಅರವಿಂದ್ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿರುವುದು ಉತ್ತಮ ಆಯ್ಕೆ ಎಂದರು.
ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ನರೇಂದ್ರ ಕುಮಾರ್ ಕೋಟ ಅವರ ‘ಸೋಲು ಅಂತಿಮವಲ್ಲ’ ಕೃತಿ ಬಿಡುಗಡೆಗೊಳಿಸಲಾಯಿತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತಾಪಂ ಕಾರ್ಯನಿರ್ವಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟ ಇಬ್ರಾಹಿಂ ಸಾಹೇಬ್, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಸುಲತಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಕುರಿತು ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್. ಶೆಣೈ ಮಾತನಾಡಿದರು. ಶ್ರೀಧರ ಹಂದೆ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಂ ಶೆಟ್ಟಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮುನ್ನ ಕೋಟತಟ್ಟು ಪಂಚಾಯತ್ ನಿಂದ ಹೊರಟ ಶೋಭಾಯಾತ್ರೆಯು ಕಾರಂತ ಥೀಂ ಪಾರ್ಕ್ ನಲ್ಲಿ ಕಾರಂತರ ಪುತ್ಥಳಿಗೆ ನಮನ ಸಲ್ಲಿಸಿ ಕಾರ್ಯಕ್ರಮದ ವೇದಿಕೆಗೆ ಆಗಮಿಸಿತು.
ಕಾರ್ಯಕ್ರಮದ ನಂತರ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.