ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸುಗಳಲ್ಲಿ ದುಶ್ಚಟ ಮುಕ್ತ ಸಮಾಜವೂ ಒಂದಾಗಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಲೋಚನೆಯಂತೆ ಗಾಂಧಿ ಜಯಂತಿಯ ದಿನಾಂಕದ ಮೊದಲು ಮತ್ತು ನಂತರ ಹತ್ತು ದಿನಗಳ ಕಾಲ ದುಶ್ಚಟಮುಕ್ತ ಸಮಾಜ ನಿರ್ಮಾಣ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕಲಗಪನರ ನಮಗೆ ಆದರ್ಶ ಎಂದು ಕುಂದಾಪುರ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಮಂಗಳವಾರ ಕೊಲ್ಲೂರು ಮೂಕಾಂಬಿಕಾ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ.) ಬೈಂದೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ಉಡುಪಿ, ತಾಲೂಕು ಜನಜಾಗೃತಿ ವೇದಿಕೆ, ಬೈಂದೂರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬೈಂದೂರು ತಾಲೂಕು ಇವರ ಸಹಯೋಗದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧಿ ಜಯಂತಿ ಪ್ರಯುಕ್ತ ಜನಜಾಗೃತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ವಿಧಾನಸಭಾ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ ದುಶ್ಚಟದಿಂದ ಮುಕ್ತರಾಗಿ ಪ್ರಾಮಾಣಿಕವಾಗಿ ಜೀವನ ಸಾಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಪಾನಮುಕ್ತ ಸಾಧಕರಿಗೆ ಅಭಿನಂದಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಸಹಾಯ ಧನ ವಿತರಿಸಿದರು. ಈ ಸಂದರ್ಭದಲ್ಲಿ ಪಾನಮುಕ್ತ ಸದಸ್ಯರು ಅವರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ಜನಜಾಗೃತಿಯ ಅಧ್ಯಕ್ಷ ಸುಧಾಕರ ಆಚಾರ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್(ರಿ.) ಪ್ರಾದೇಶಿಕ ನಿರ್ದೇಶಕರು ವಸಂತ ಸಲ್ಯಾನ್, ಉಡುಪಿ ಜಿಲ್ಲಾ ಜನಜಾಗೃತಿಯ ಅಧ್ಯಕ್ಷ ನವೀನ್ ಅಮೀನ್, ಕೊಲ್ಲೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಭಟ್, ಬೈಂದೂರು ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಘುರಾಮ ಕೆ.ಪೂಜಾರಿ, ಬೈಂದೂರು ಭಜನ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ವಲಯದ ಅಧ್ಯಕ್ಷರಾದ ಸತೀಶ್ ಎಂ.ನಾಯ್ಕ್, ಮಹಾಬಲ ಪೂಜಾರಿ, ವೆಂಕಟ್ ಪೂಜಾರಿ, ವಿಶ್ವನಾಥ್ ಶೆಟ್ಟಿ, ಎಮ್.ಆರ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ.) ಬೈಂದೂರು ತಾಲೂಕಿನ ಯೋಜನಾಧಿಕಾರಿ ವಿನಾಯಕ ಪೈ ಸ್ವಾಗತಿಸಿದರು. ರವಿಶಂಕರ್ ಹಾಗೂ ಗೀತಾ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮ ಪ್ರಾರ್ಥಿಸಿದರು.