ಕುಂದಾಪುರ ಮಿರರ್ ಸುದ್ದಿ…
ಕೋಟ: ಅಳಿವಿನಂಚಿನಲ್ಲಿರುವ ಹೂವಿನಕೋಲು ಯಕ್ಷಗಾನ ಪ್ರಕಾರವನ್ನು ಮನೆಮನೆಗಳಿಗೆ ಕೊಂಡೊಯ್ದು ಎತ್ತಿ ಹಿಡಿವ ಕಾರ್ಯ ನಿಜಕ್ಕೂ ಶ್ಲಾಘನೀಯ. ಭವಿಷ್ಯದ ಕಲಾವಿದನಾಗುವಂತೆ ಹೂವಿನ ಕೋಲು ಕಾರ್ಯಕ್ರಮದ ಮೂಲಕ ಮಕ್ಕಳನ್ನು ರೂಪಿಸಿ, ಮನೆ ಮನೆಗಳಿಗೆ ಕಲೆಗಳನ್ನು ಪರಿಚಯಿಸುವ ಕೆಲಸ ಇದಾಗಿದೆ. ಮಕ್ಕಳು ತಾವು ಬೆಳೆಯುವುದಲ್ಲದೇ ಮನೆಗಳಲ್ಲಿನ ಮಕ್ಕಳನ್ನು ಕಲೆಗಾಗಿ ಪ್ರಚೋದಿಸುವ ಕಾಯಕ ಸುಸಂಸ್ಕøತವಾಗಿ ಬೆಳಗುತ್ತಿದೆ ಯಶಸ್ವಿ ಕಲಾವೃಂದ. ಸಮಾಜದ ಗಣ್ಯರು ಪುರಾತನ ಕಲೆಯಾದ ಇಂತಹ ಪ್ರಕಾರಗಳನ್ನು ಮನೆಗಳಿಗೆ ಕರೆದು ಕಾರ್ಯಕ್ರಮ ಏರ್ಪಡಿಸಿಕೊಂಡು ಸಂಭ್ರಮಿಸಿ ಕಲೆಗೆ ಪ್ರೋತ್ಸಾಹಿಸುವಂತಾಗಬೇಕು ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ಹುಸೇನ್ ರಹೀಮ್ ಶೇಖ್ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.
ಕುಂದಾಪುರ ವಕೀಲರ ಸಂಘ ಕುಂದಾಪುರದಲ್ಲಿ ಕರಾವಳಿ ಕರ್ನಾಟಕದ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮವಾಗಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆಯ ಹೂವಿನ ಕೋಲು ಯಕ್ಷ ಕಲಾ ಪ್ರಕಾರದ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಕ್ಟೋಬರ್ 13ರಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಮಾತನ್ನಾಡಿದರು. ಇದೇ ಸಂದರ್ಭದಲ್ಲಿ ಕಲೆಯ ಬಗೆಗಿನ ದೊಡ್ಡ ಜವಾಬ್ದಾರಿಯನ್ನು ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಇವರನ್ನು ವಕೀಲರ ಸಂಘ ಪರವಾಗಿ ಗೌರವಿಸಿದರು.
ಅದ್ಭುತವಾದ ಮಕ್ಕಳ ಪ್ರತಿಭೆಯನ್ನು ಗೌರವಿಸಿ ಅವಕಾಶ ಕಲ್ಪಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಮಕ್ಕಳು ಬೆಳೆದು ಬೆಳಗುವಂತಾಗಬೇಕಾದರೆ ಅವಕಾಶಗಳು ಅತೀ ಅವಶ್ಯ. ಇಂತಹ ಅವಕಾಶಗಳು ಮಕ್ಕಳ ಪಾಲಿಗೆ ನಿರಂತರವಾಗಿ ದೊರೆಯಲಿ ಎಂದು ವಕೀಲರಾದ ಮಂಜುನಾಥ ಗಿಳಿಯಾರು ಪ್ರಸ್ತಾಪಿಸಿದರು.
ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್., ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಶ್ರೀಮತಿ ರೋಹಿಣಿ ಡಿ., ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆ. ಎಂ. ಎಫ್. ಸಿ ನ್ಯಾಯಾಧೀಶರಾದ ಕು| ವಿದ್ಯಾ ಎ.ಎಸ್., ಹಾಗೂ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾದ ಬೀನಾ ಜೊಸೆಫ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ಯಶಸ್ವಿ ಕಲಾವೃಂದದ ಪುಟಾಣಿಗಳಿಂದ ‘ದ್ರೌಪದಿ ಪ್ರಾತಪ’ ಹಾಗೂ ‘ಸುಧನ್ವಾರ್ಜುನ’ ಪ್ರಸಂಗದ ಭಾಗವನ್ನು ಹೂವಿನಕೋಲು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ಅಭಿಯಾನಕ್ಕೆ ಮಂಗಳ ಹಾಡಿದರು.