ಕರಾವಳಿ ಅಡುಗೆ ಕಾರ್ಮಿಕರು ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಥಮ ವಾರ್ಷಿಕಾಧಿವೇಶನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸಮಾಜದಲ್ಲಿ ಅಡಿಗೆಯವರು ಮತ್ತು ಪುರೋಹಿತರು ಬಹು ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ನಿತ್ಯಾನ್ನದಾನ ವ್ಯವಸ್ಥೆಯಲ್ಲಿ ಅಡಿಗೆಯವರು ಸಿದ್ಧಪಡಿಸಿದ ಆಹಾರವನ್ನು ಪುರೋಹಿತರು ಭಗವಂತನಿಗೆ ಸಮರ್ಪಿಸುತ್ತಾರೆ. ನಂತರ ಅದು ಹಸಿದ ಹೊಟ್ಟೆಗಳನ್ನು ತಲುಪುತ್ತದೆ. ಕೊರೊನಾ ಕಾರಣದಿಂದ ಈ ಎರಡು ಉದ್ಯೋಗಗಳನ್ನು ನಿರ್ವಹಿಸುವವರು ತೀರಾ ಸಂಕಷ್ಟಕ್ಕೆ ಸಿಲುಕಿದರು. ಅದೇ ಇಂದು ಇವರೆಲ್ಲ ಸಂಘಟಿತರಾಗಿ ಸರ್ಕಾರದ ಗಮನ ಸೆಳೆಯುವಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಮಂಗಳೂರಿನ ಅಸಂಘಟಿತ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಹೊಳ್ಳ ಹೇಳಿದರು.
ಬಿದ್ಕಲ್ಕಟ್ಟೆಯಲ್ಲಿ ನಡೆದ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಬೆಂಗಳೂರು ಇದರೊಂದಿಗೆ ನೋಂದಾಯಿತ ಕರಾವಳಿ ಅಡುಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಕುಂದಾಪುರ ಇದರ ಪ್ರಥಮ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಂಘಟನೆಗಳಿಗೆ ಸರ್ಕಾರಿ ಸೌಲಭ್ಯ ಸಿಗಬೇಕಾದರೆ, ಸಂಘಟನೆ ಬಲಿಷ್ಠವಾಗಬೇಕು. ಸರ್ಕಾರ ಸಂಘಟನೆಗಳ ಸದಸ್ಯ ಬಲವನ್ನು ಗಮನಿಸುತ್ತದೆ. ಅಡುಗೆ ಕಾರ್ಮಿಕರು ಮತ್ತು ಪುರೋಹಿತರ ಸಂಘಟನೆಗಳ ಸದಸ್ಯ ಸಂಖ್ಯೆ ಅವಿಭಜಿತ ದ. ಕ. ಜಿಲ್ಲೆಯಲ್ಲಿ ಒಟ್ಟು 28 ಸಾವಿರ ಮಾತ್ರ. ಅದು 50 ದಾಟಿದರೆ, ವಿಧಾನಸಭೆಯಲ್ಲಿ ಕಾರ್ಮಿಕರ ಪರವಾಗಿ ತಾನು ಧ್ವನಿ ಎತ್ತುವೆ ಎಂದು ಸಚಿವರು ತಿಳಿಸಿದ್ದಾರೆ. ನಮ್ಮ ಮೊರೆ ಕೇಂದ್ರ ಸರ್ಕಾರವನ್ನು ತಲುಪಬೇಕಾದರೆ, ನಮ್ಮ ಸದಸ್ಯ ಬಲ 50 ಲಕ್ಷ ದಾಟಬೇಕು. ಆದರೆ ದೇಶದಾದ್ಯಂತದಿಂದ ಈಗಿರುವುದು 37 ಲಕ್ಷ ಮಾತ್ರ. ಆದ್ದರಿಂದ ಈ ಕೆಲಸ ನಿರ್ವಹಿಸುವವರು ಪ್ರತಿಯೊಬ್ಬರೂ ಸಂಘದಲ್ಲಿ ನೋಂದಾಯಿಸಿಕೊಂಡು ಇ – ಶ್ರಮ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಹಿರಿಯ ಬಾಣಸಿಗರಾದ ಕೋಟೇಶ್ವರ ಬಡಾಮನೆ ರಾಘವೇಂದ್ರ ಐತಾಳ ಮತ್ತು ಪದ್ಮನಾಭ ಉಳ್ಳೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಪದ್ಮನಾಭ ಉಳ್ಳೂರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ಸಂಪನ್ಮೂಲ ವ್ಯಕ್ತಿ ಸಾಸ್ತಾನ ವಾಸುಕಿ ಅಸೋಸಿಯೇಟ್ಸ್ ನ ಕೆ. ಸತ್ಯನಾರಾಯಣ ಉಡುಪ ಮಾತನಾಡಿ ಬ್ರಾಹ್ಮಣರು, ಅಡಿಗೆ ಕಾರ್ಮಿಕರು ಮತ್ತು ಪುರೋಹಿತರಿಗೆ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳು ಮತ್ತು ಅವನ್ನು ದೊರಕಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು. ಈಗಿನ ಸರ್ಕಾರದ ಧೋರಣೆಯಂತೆ ಕಡು ಬಡವ ಬ್ರಾಹ್ಮಣರಿಗೂ ಎ ಪಿ ಎಲ್ ಕಾರ್ಡೇ ಇರುತ್ತದೆ. ಆದರೆ, ಅಂತವರಿಗೂ ಪ್ರಯೋಜನ ಸಿಗುವ ಹಲವು ಯೋಜನೆಗಳಿವೆ. ಆದ್ದರಿಂದ ಬ್ರಾಹ್ಮಣರಿಗೆ ಯಾವ ಸರ್ಕಾರಿ ಸೌಲಭ್ಯವೂ ಸಿಗುವುದಿಲ್ಲ ಎಂಬ ತಪ್ಪು ಗ್ರಹಿಕೆಯಿಂದ ಅಗತ್ಯ ನೋಂದಣಿಗಳನ್ನು ಮಾಡದಿರುವುದು ಸರಿಯಲ್ಲ. ಕಿಸಾನ್ ಸಮ್ಮಾನ್, ಇ – ಶ್ರಮ್ ಮುಂತಾದ ಕಾರ್ಡುಗಳ ಮೂಲಕ ಸರ್ಕಾರ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸುತ್ತಿದೆ. ಎಲ್ಲಾ ಕಾರ್ಡುಗಳಿಗೂ ಆಧಾರ್ ಜೋಡಣೆಯಾಗಿರುವುದರಿಂದ ಸರ್ಕಾರಕ್ಕೆ ನೈಜ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡಲು ಸಹಾಯವಾಗುತ್ತದೆ. ಆದ್ದರಿಂದ ಎಲ್ಲರೂ ಅಗತ್ಯ ನೋಂದಾವಣೆಗಳನ್ನು ಮಾಡಿ ಕಾರ್ಡುಗಳನ್ನು ಹೊಂದಿರಬೇಕು ಎಂದು ಕರೆ ನೀಡಿದರು.
ಕುಂದಾಪುರ ತಾಲೂಕು ಕರಾವಳಿ ಅಡುಗೆ ಕಾರ್ಮಿಕರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ. ಅರವಿಂದ ಐತಾಳ ಸ್ವಾಗತಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್. ರಾಘವೇಂದ್ರ ಅಡಿಗ, ಪ್ರತಿ ಜಿಲ್ಲಾ ಮಟ್ಟದಲ್ಲೂ ಸಂಘವನ್ನು ರಚಿಸಿ, ನೋಂದಾಯಿಸಿ ರಾಜ್ಯಮಟ್ಟಕ್ಕೆ ವ್ಯಾಪಿಸಬೇಕು. ಆಗ ಮಾತ್ರ ಕಾರ್ಮಿಕ ಸಚಿವರಿಗೆ ನಾವು ಅಹವಾಲು ಸಲ್ಲಿಸುವುದು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಅಡುಗೆಯವರೂ ಸದಸ್ಯತ್ವ ಪಡೆದು, ಸಂಘಟನೆಯನ್ನು ಬಲಗೊಳಿಸಬೇಕು, ಆ ಮೂಲಕ ತಾವೂ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ಮನವಿ ಮಾಡಿದರು. ಸಂಘದ ಪ್ರತಿ ರೂಪಾಯಿಯನ್ನೂ ಪೋಲು ಮಾಡದೆ ಸದ್ವಿನಿಯೋಗ ಮಾಡಲಾಗುವುದು ಎಂಬ ಭರವಸೆಯನ್ನೂ ಅವರು ನೀಡಿದರು.
ಕಾರ್ಯದರ್ಶಿ ಶಿವಾನಂದ ಅಡಿಗ ಸಂಘದ ಪ್ರಥಮ ವಾರ್ಷಿಕ ವರದಿ ಓದಿದರೆ, ಖಜಾಂಚಿ ವಿಶ್ವನಾಥ ಭಟ್ ಲೆಕ್ಕಪತ್ರ ಮಂಡಿಸಿದರು. ಸಭೆ ಸರ್ವಾನುಮತದಿಂದ ಅನುಮೋದಿಸಿತು.
ಅಸಂಘಟಿತ ಪುರೋಹಿತರ ಸಂಘದ ಉಪಾಧ್ಯಕ್ಷ ಸುಭಾಷ್ ಪರಾಂಜಪೆ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷೆ ಅನ್ನಪೂರ್ಣ ಕಾರಂತ, ಜೊತೆ ಕಾರ್ಯದರ್ಶಿ ಚಿತ್ರಾ ಪಿ., ಕಾರ್ಯಕಾರಿ ಸಮಿತಿ ಸದಸ್ಯ ನಾಗೇಂದ್ರ ಬಿಳಿಯ, ಮಂಜುನಾಥ ಮಯ್ಯ, ಗಣೇಶ್ ಉಪಾಧ್ಯ, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಕ್ಷತಾ ಐತಾಳ ಕಾರ್ಯಕ್ರಮ ನಿರೂಪಿಸಿದರು. ಮಹಾಲಕ್ಷ್ಮೀ ಐತಾಳ ಪ್ರಾರ್ಥಿಸಿದರು. ಕಾರ್ಯದರ್ಶಿ ಶಿವಾನಂದ ಅಡಿಗ ವಂದಿಸಿದರು.