ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೊಲ್ಲೂರು ಮುಖ್ಯ ರಸ್ತೆ ಇಡೂರು ಸಮೀಪ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೀವ್ರ ತೊಡಕ್ಕಾಗಿದೆ. ಇಡೂರು ಕುಂಜ್ಞಾಡಿ ದೈವಸ್ಥಾನ ಸ್ವಾಗತ ಗೋಪುರಕ್ಕಿಂತ ತುಸು ಹಿಂದೆ ಕಿರು ಸೇತುವೆಯಿಂದ ಸಂಪೂರ್ಣ ಕಿತ್ತೆದ್ದು ಹೋಗಿದ್ದು ಮಳೆಗಾಲದಲ್ಲಿ ಹೊಂಡಾಗಂಡಿಗಳಿಂದ ಕೂಡಿತ್ತು. ಈಗ ಬಿಸಿಲಿಗೆ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ಮಾಡಬೇಕಾಗಿದೆ.
ಇಲ್ಲಿ ಕಳೆದ ವರ್ಷವೇ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಸಂಪೂರ್ಣ ದುರಸ್ತಿ ಕಾರ್ಯ ಆಗಲೇ ಇಲ್ಲ. ರಸ್ತೆ ಸಂಪೂರ್ಣ ಅಗಲೀಕರಣ ಸಂದರ್ಭ ಸರಿಯಾಗಬಹುದು ಎಂದು ಜನ ಭಾವಿಸಿದ್ದರು. ಆದರೆ ರಸ್ತೆ ಹಾಗೆಯೇ ಉಳಿದುಕೊಂಡಿತ್ತು. ಆಗ ತುರ್ತು ತೇಪೆ ಹಾಕಿ ಇಲಾಖೆ ಕೈ ತೊಳೆದುಕೊಂಡಿತ್ತು. ಮತ್ತೆ ಅದರ ಸುದ್ಧಿಗೆ ಹೋಗಲಿಲ್ಲ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗಿತ್ತು. ಅದು ಸಂಬಂಧಪಟ್ಟ ಇಲಾಖೆಗಳ ಕಣ್ಣಿಗೆ ಬೀಳಲೇ ಇಲ್ಲ. ಈಗ ಮಳೆಗಾಲ ಮುಗಿದಿದೆ. ತುರ್ತಾಗಿ ತೇಪೆ ಸಂಚಾರಕ್ಕೆ ರಸ್ತೆಯನ್ನು ಸುಗಮ ಗೊಳಿಸುವ ನಿಟ್ಟಿನಲ್ಲಿಯೂ ಸಂಬಂಧಪಟ್ಟವರು ಯೋಚನೆ ಮಾಡುತ್ತಿಲ್ಲ. ಹೊಂಡಮಯ ರಸ್ತೆಯಲ್ಲಿ ಈಗ ಕ್ರಷರ್ ಹುಡಿ ಹಾಕಿದ ಪರಿಣಾಮ ದಟ್ಟವಾಗಿ ದೂಳು ಏಳುತ್ತಿದೆ. ವಾಹನ ಸಂಚಾರ ಸಂದರ್ಭ ದಟ್ಟ ಪ್ರಮಾಣದಲ್ಲಿ ದೂಳು ಏಳುತ್ತಿದ್ದು ದಾರಿಯೇ ತೋರದಷ್ಟು ಸಮಸ್ಯೆ ಎದುರಾಗುತ್ತಿದೆ. ದ್ವಿಚಕ್ರ ವಾಹನ, ರಿಕ್ಷಾ, ಪಾದಾಚಾರಿಗಳ ಗೋಳು ಹೇಳತಿರದು. ಸಮೀಪದ ನಿವಾಸಿಗಳಿಗೂ ನಿತ್ಯ ಕಿರಿಕಿರಿ.
ಶ್ರೀ ಕ್ಷೇತ್ರ ಕೊಲ್ಲೂರಿಗೆ ಹೋಗುವ ಮುಖ್ಯ ಹೆದ್ದಾರಿಯೇ ಇಷ್ಟೊಂದು ಹದಗೆಟ್ಟು ಹೋಗಿರುವುದು, ಸರಿಪಡಿಸದೇ ಇರುವುದು ಯಾತ್ರಾರ್ಥಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ಈ ಮುಖ್ಯ ಹಾಗೂ ಮಹತ್ವದ ರಸ್ತೆಯನ್ನೇ ತುರ್ತು ದುರಸ್ತಿ ಮಾಡದ ಬಗ್ಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ.