ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಂದಿನಿ ರೈತರ ಭಾಗ್ಯದ ಬಾಗಿಲು. ನಂದಿನಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಕೋವಿಡ್ ಸಂದರ್ಭದಲ್ಲಿ ಹತ್ತು ಲಕ್ಷಕ್ಕೂ ಮಿಕ್ಕಿ ರೈತರ ಕೈ ಹಿಡಿಯುವಲ್ಲಿ ಗ್ರಾಹಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ವರ್ಷದಲ್ಲಿ ಎರಡು ಬಾರಿ ರಾಜ್ಯಾದ್ಯಂತ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಈ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳಿಗೆ 10% ರಿಯಾಯಿತಿ ಇರಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇದರ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಖಂಬದಕೋಣೆ ಹೇಳಿದರು.
ಕುಂದಾಪುರದ ಹೊಸ ಬಸ್ ನಿಲ್ದಾಣದ ಸಮೀಪದ ನಂದಿನಿ ಪಾರ್ಲರ್ ನಲ್ಲಿ ಆ.19 ಗುರುವಾರದಿಂದ ಆ.31ರವರೆಗೆ 13 ದಿನಗಳ ಕಾಲ ನಡೆಯಲಿರುವ ನಂದಿನಿ ಸಿಹಿ ಉತ್ಸವ 2021-22 ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವ ಜೊತೆಗೆ ನಂದಿನಿ ಮಾರುಕಟ್ಟೆ ವಿಸ್ತರಿಸಿ ರಾಜ್ಯದ ಹೈನುಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿಹಿಉತ್ಸವ ಆಯೋಜಿಸಲಾಗಿದೆ. ನಮ್ಮ ಒಕ್ಕೂಟದಲ್ಲಿ 70 ಸಾವಿರ ರೈತರಿದ್ದು ರಾಜ್ಯದಲ್ಲಿ ಒಟ್ಟು 10 ಲಕ್ಷಕ್ಕೂ ಮಿಕ್ಕಿದ ರೈತರು 80 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಉತ್ಪಾದಿಸಿ ಅದನ್ನು ಗ್ರಾಹಕರಿಗೆ ವಿವಿಧ ಉತ್ಪನ್ನಗಳ ರೂಪದಲ್ಲಿ ನೀಡಲಾಗುತ್ತಿದೆ. ಉಭಯ ಜಿಲ್ಲೆಯ ಗ್ರಾಹಕರು ನಿಜಕ್ಕೂ ಅಭಿನಂದನಾರ್ಹರು. ಮುಂದಿನ ದಿನದಲ್ಲಿ ಐಸ್ ಕ್ರೀಂ ಕೋಲ್ಡ್ ಚೈನ್ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಲು ಕ್ರಮಕೈಗೊಳ್ಳಲಾಗಿದೆ. 300 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ ಉದ್ದೇಶವಿದೆ ಎಂದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇದರ ನಿರ್ದೇಶಕ ಗೋಪಾಲಕೃಷ್ಣ ಕಾಮತ್ ಮಾತನಾಡಿ, ನಂದಿನಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿದೆ. ಹೈನುಗಾರರ ಸ್ಪಂದನೆಯಿಂದಾಗಿ ಹಾಲು ಉಡುಪಿ, ದ.ಕ ಜಿಲ್ಲೆಯಲ್ಲಿ ಮಾರಾಟವಾಗಿ ಉಳಿಯುವ ಹಂತಕ್ಕೆ ಬಂದಿರುವುದರಿಂದ ಸಿಹಿ ತಿನಿಸುಗಳು, ಐಸ್ ಕ್ರೀಂ, ಹಾಲಿನ ಪುಡಿ ಮೊದಲಾದ ಉತ್ಪನ್ನಗಳ ತಯಾರಿಗೆ ಯೋಜನೆ ರೂಪಿಸಲಾಗಿದೆ. ಪ್ರತಿ ಹತ್ತು ದಿನಕ್ಕೊಮ್ಮೆ ನಗದು ರೂಪದಲ್ಲಿ ರೈತರಿಗೆ ಹಣ ನೀಡಲು ಒಕ್ಕೂಟ ಮುಂದಾಗಿದೆ ಎಂದರು.
ಕುಂದಾಪುರ ನಂದಿನಿ ಪಾರ್ಲರ್ ಗುತ್ತಿಗೆದಾರ ವಸಂತ್ ಶೆಟ್ಟಿ, ಮಾರುಕಟ್ಟೆ ವಿಭಾಗದ ಅಧಿಕಾರಿ ಧನುಷ್ ಕುಮಾರ್, ನಗದು ವಿಭಾಗದ ಹರೀಶ್, ಉಡುಪಿ ಡೇರಿ ಅಧಿಕಾರಿಗಳಿದ್ದರು.
ನಂದಿನಿ ವಿಸ್ತರಣಾಧಿಕಾರಿ ಸ್ವಾಗತಿಸಿ, ವಂದಿಸಿದರು.