ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿಶ್ವಕ್ಕೆ ಬುದ್ಧಿ ಹೇಳುವ ಭಾರತದಲ್ಲಿ ಮನೆಮನೆಯಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಧರ್ಮ ಜಾಗೃತಿ ಮನೆಯಿಂದಲೇ ಆರಂಭವಾದರೆ ಮತಾಂತರ, ಲವ್ ಜಿಹಾದ್ ಮೊದಲಾದವುಗಳಿಗೆ ಬಲಿಬೀಳುವ ಪ್ರಮೇಯವೇ ಬರುವುದಿಲ್ಲ. ಹಿಂದೂ ಧರ್ಮದೊಳಗಿನ ಜಾತಿ ಕಚ್ಚಾಟವನ್ನು ಬಿಟ್ಟು ನಾವೆಲ್ಲಾ ಹಿಂದೂಗಳು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಹೇಳಿದರು.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯಲ್ಲಿರುವ ಕೋಟ್ಯಾಂತರ ಜೀವಸಂಕುಲದಲ್ಲಿ ಮಾತನಾಡುವ, ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಜೀವಿ ಎಂದರೆ ಅದು ಮನುಷ್ಯ. ತಿಳುವಳಿಕೆ, ಜ್ಞಾನ, ನಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವ, ಅಳವಡಿಸಿಕೊಳ್ಳುವ ಅಧ್ಯತೆಗಳು ನಮಗಿದೆ. ನಮ್ಮ ಧರ್ಮದ ಶ್ರೇಷ್ಠತೆಯನ್ನು ಯಾರೂ ಮರೆಯಬಾರದು. ಹಿಂದೂ ಧರ್ಮ ನಮಗೆ ಸಂಸ್ಕಾರವನ್ನು ನೀಡಿದ್ದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ವಿಜಯ ಕುಮಾರ್ ಮಾತನಾಡಿ, ಒಂದು ಕಾಲದಲ್ಲಿ ನೇಪಾಳ, ಬಂಗಾಳ ಎಲ್ಲವೂ ಹಿಂದೂ ರಾಷ್ಟ್ರವಾಗಿತ್ತು. ಆದರೆ ನಮ್ಮತನವನ್ನು ನಾವು ಕಳೆದುಕೊಂಡ ಪರಿಣಾಮ ಹಿಂದೂ ದೇಶ ಛಿದ್ರವಾಗಿದೆ. ಹಿಂದೂ ಜನ ಜಾಗೃತಿ ಸಮಿತಿ ಕಳೆದ 20 ವರ್ಷಗಳಿಂದ ಪಂಚಸೂತ್ರಗಳೊಂದಿಗೆ ಕೆಲಸ ಮಾಡುತ್ತಿದೆ. ಹಿಂದೂ ಧರ್ಮದ ಬಗ್ಗೆ ಶಿಕ್ಷಣ, ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದು, ಧರ್ಮದ ರಕ್ಷಣೆಗಾಗಿ ಹೋರಾಟ, ಹಿಂದೂ ರಾಷ್ಟ್ರದ ರಕ್ಷಣೆ, ರಾಷ್ಟ್ರ ಧ್ವಜದ ಗೌರವ ಕಾಪಾಡುವುದರ ಬಗ್ಗೆ ಹಿಂದೂಗಳನ್ನು ಸಂಘಟಿತರನ್ನಾಗಿ ಮಾಡುತ್ತಿದೆ ಎಂದರು. ಈ ಸಂದರ್ಭ ಪುರೋಹಿತ ಅನಂತ ಅಡಿಗ ಉಪಸ್ಥಿತರಿದ್ದರು.