ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಫುಲ ಅವಕಾಶವಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚಿಂದ್ರ ಹಾಕೆ ಹೇಳಿದರು.
Video:
ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ 17ನೇ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿ, ಕ್ರೀಡಾ ಜ್ಯೋತಿ ಹಸ್ತಾಂತರಿಸಿ, ಧ್ವಜಾರೋಹಣಗೈದು ಮಾತನಾಡಿದರು.
ಎಲ್ಲರಲ್ಲೂ ಅವರದ್ದೇ ಆದ ಸುಪ್ತ ಪ್ರತಿಭೆಗಳು ಇರುತ್ತದೆ. ಹೊರಜಗತ್ತಿನಲ್ಲಿ ಎದುರಾಗುವ ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಿ ಉತ್ತಮ ಅನುಭವದೊಂದಿಗೆ ಸಾಧನೆಗೈಯುವುದು ಜೀವನದ ಗುರಿಯಾಗಿರಬೇಕು. ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಚಟುವಟಿಕೆ, ಕಲಿಕಾ ವಾತಾವರಣ ಹಾಗೂ ಪರಿಸರವು ಇಲ್ಲಿನ ಶಿಸ್ತು ಬದ್ಧತೆಯನ್ನು ತೋರಿಸುತ್ತಿದೆ ಎಂದವರು ಪ್ರಶಂಸಿಸಿದರು.
ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ಅಜಯ್ ಕುಮಾರ್, ಅನ್ವಿತ್ ಶೆಟ್ಟಿ, ಆಮ್ನಾ, ಯಾಯಿನ್ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಇದೇ ವೇಳೆ ಎಸ್ಪಿ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ, ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ಡಿಸಿಲ್ವಾ, ಗುರುಕುಲ ಶಾಲೆ ಪ್ರಾಂಶುಪಾಲ ಮೋಹನ್ ಕೆ. ಇದ್ದರು. ಪ್ರಾಧ್ಯಾಪಕರಾದ ನಾಗೇಶ್ ಸ್ವಾಗತಿಸಿ, ಸುಜಾತಾ ಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಐಶ್ವರ್ಯಾ ವಂದಿಸಿದರು.