ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪುರಾಣ ಪ್ರಸಿದ್ಧ ಕುಂದೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಲಕ್ಷದೀಪೋತ್ಸವ ಮತ್ತು ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಪೂರ್ವಾಹ್ನ 9ರಿಂದ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸೂರ್ಯೋದಯದಿಂದ ಸೂರ್ಯಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನಾ ಮಂಡಳಿಗಳ ಒಕ್ಕೂಟದಿಂದ ಶ್ರೀ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ನಡೆಯಿತು. ಸಂಜೆ ಲಕ್ಷದೀಪೆÇೀತ್ಸವ ಪ್ರಯುಕ್ತ ನೆರೆದಿದ್ದ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ದೇವಳದ ಪುಷ್ಪ ರಥೋತ್ಸವ ಹಾಗೂ ಶ್ರೀ ದೇವರ ಕಟ್ಟೆಪೂಜೆ ನಡೆಯಿತು. ಕುಂದಾಪುರ ನಗರ ದೀಪಾಲಂಕಾರದಿಂದ ಶೋಭಾಯಮಾನವಾಗಿತ್ತು. ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು. ಬಳಿಕ ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯ ಹೊರ ಪ್ರಾಕಾರಕ್ಕೆ ಆಗಮನವಾಗುತ್ತದೆ. ಈ ಸಂದರ್ಭದಲ್ಲಿ ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಣೆ. ಕೊನೆಯ ಸುತ್ತಿನಲ್ಲಿ ಶ್ರೀ ದೇವರು ಪಲ್ಲಕ್ಕಿಯನ್ನೇರಿ ಕ್ರಮಿಸಲಾಗುತ್ತದೆ.
ನಂತರ ಪುಷ್ಪಕ ರಥದಲ್ಲಿ ವೈಭವದ ಪುರಮೆರವಣಿಗೆ ನಡೆಯಿತು. ಬಗೆ-ಬಗೆಯ ಆಕರ್ಷಣೆಗಳು. ನಾಗಸ್ವರವಾದನ, ಸಾಂಪ್ರದಾಯಿಕ ವಾದ್ಯ, ಜಾನಪದ ನೃತ್ಯಗಳು ವಿಶೇಷ ಆಕರ್ಷಣೆಯಾಗಿತ್ತು. ಶ್ರೀ ದೇವರ ಉತ್ಸವ ದೇವಾಲಯದಿಂದ ಹೊರಟು, ಹೊಸ ಬಸ್ಸ್ಟಾಂಡ್ ಬಳಿ ತಿರುಗಿ, ಪುರಸಭೆಯ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಂಗ್ಳೂರು ಗೆಳೆಯರ ಬಳಗದವರೆಗೂ ಹೋಗಿ, ನಂತರ ಬೆಳಗಿನ ಜಾವ ದೇವಾಲಯದ ರಥಬೀದಿಯ ಕಡೆಗೆ ಆಗಮಿಸಿದರು.
ಕಟ್ಟೆಪೂಜೆ: ಭಕ್ತಾದಿಗಳು ಉತ್ಸವ ಕ್ರಮಿಸುವ ಮಾರ್ಗದಲ್ಲಿ ಅಲ್ಲಲ್ಲಿ ಆಕರ್ಷಕ ವೇದಿಕೆಗಳನ್ನು ನಿರ್ಮಿಸಿ, ಅಲ್ಲಿಗೆ ಶ್ರೀ ದೇವರನ್ನು ಆಹ್ವಾನಿಸಿ, ಪೂಜೆ ನೆರವೇರಿಸಿದರು. ಭಕ್ತಿ ಶ್ರದ್ಧೆಯಿಂದ ಬೀಳ್ಕೊಡುತ್ತಾರೆ. ಸುಮಾರು 20 ನಿಮಿಷ ಅವಧಿಯ ಈ ಕಟ್ಟೆಪೂಜೆಯಲ್ಲಿ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಣೆ ನಡೆಯುತ್ತದೆ. ಹೀಗೆ ಸುಮಾರು ಹದಿನಾರು ಕೇಂದ್ರಗಳಲ್ಲಿ ಕುಂದೇಶ್ವರನಿಗೆ ಕಟ್ಟೆಪೂಜೆ ನಡೆಯಿತು. ದೇವಾಲಯದ ಅಶ್ವತ್ಥಕಟ್ಟೆಯಲ್ಲಿ ಪೂಜೆ; ಅಷ್ಟಾವಧಾನ ಸೇವೆ. ದೇವಾಲಯದ ಹೊರ ಸುತ್ತಿನಲ್ಲಿ ಮತ್ತೊಂದು ಕಟ್ಟೆಪೂಜೆ. ಪ್ರದಕ್ಷಿಣ ಪಥದಲ್ಲಿರುವ ಈಡುಗಲ್ಲಿಗೆ ಸಂಪ್ರದಾಯದಂತೆ ತೆಂಗಿನ ಕಾಯಿ ಒಡೆಯುವುದು ಮೊದಲಾದ ಸಂಪ್ರದಾಯಗಳು ನಡೆದವು.
ಸಂಜೆ ನೃತ್ಯ ವಿದುಷಿ ಪ್ರವಿತಾ ಅಶೋಕ ಅವರ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ನಡೆಯಿತು. ನಗರದ ವಿವಿಧ ಕಡೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಯಕ್ಷಗಾನ, ನಾಟಕ, ಸಂಗೀತ ರಸಮಂಜರಿ ಇತ್ಯಾದಿ ಮನೋರಂಜನಾ ಕಾರ್ಯಕ್ರಮಗಳ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಕೃಷ್ಣಾನಂದ ಚಾತ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ ಶೆಟ್ಟಿ, ವಿಶ್ವನಾಥ ಪೂಜಾರಿ, ನಾಗರಾಜ ರಾಯಪ್ಪನಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಹೆಚ್., ಸವಿತಾ ಜಗದೀಶ್, ಅರ್ಚಕರು, ಪದನಿಮಿತ್ತ ಅರ್ಚಕರು ಉಪಸ್ಥಿತರಿದ್ದರು.
ಕುಂದೇಶ್ವರ ದೇವಳದಿಂದ ಮುಖ್ಯರಸ್ತೆಯ ತನಕ ವೈಭವದ ವಿದ್ಯುತ್ ದೀಪದ ಅಲಂಕಾರ, ಕುಂದಾಪುರ ಪೇಟೆಯಲ್ಲಿ ಝಗಮಗಿಸುವ ವಿದ್ಯುತ್ ದೀಪಗಳ ಝಲಕ್, ಸಾಲು ಸಾಲು ಅಂಗಡಿ-ಮುಂಗಟ್ಟುಗಳು, ಎರಡು ಕಡೆಗಳಲ್ಲಿ ಮನೋರಂಜನಾ ಪಾರ್ಕ್ಗಳಿದ್ದವು.
ಕುಂದಾಪುರ ದೇವಸ್ಥಾನ ಸಮೀಪ ಕಾಂತಾರ ಮಾದರಿಯ ಹೂವಿನಿಂದ ನಿರ್ಮಿಸಿದ ಸ್ತಬ್ದಚಿತ್ರ ಎಲ್ಲರ ಗಮನ ಸಳೆಯಿತು.