ಕೋಟೇಶ್ವರ: ಕಾಳಾವರದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ

0
286

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರ ಇಲ್ಲಿ ಚಂಪಷಷ್ಠಿ (ಹಿರಿಷಷ್ಠಿ) ಮಹೋತ್ಸವ ನ.29 ರಂದು ನಡೆಯಿತು. ನ.30ರಂದು ನಾಗಮಂಡಲ (ಕಟ್ಟುಕಟ್ಟಳೆ) ಹಾಗೂ ತುಲಾಭಾರ ಸೇವೆ ನಡೆಯಿತು.

ತಂತ್ರಿ ಕೋಟ ಶ್ರೀ ಕೃಷ್ಣ ಸೋಮಯಾಜಿಗಳ ನೇತೃತ್ವದಲ್ಲಿ ನ.29ರಂದು ಉದಯ ಗಂಟೆ 4ರಿಂದ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ, ಉದಯ ಗಂಟೆ 4.30ರಿಂದ ಹಣ್ಣುಕಾಯಿ, ಹೂವುಕಾಯಿ, ಕಲಶ ಸಮರ್ಪಣೆ, ಕರ್ಪೂರ ಆರತಿ, ದೇವರ ದರ್ಶನ, ತೀರ್ಥಪ್ರಸಾದ ವಿತರಣೆ, ಪೂರ್ವಾಹ್ನ 7 ಗಂಟೆಯಿಂದ ಋತ್ವಿಜರಿಂದ ವೇದ ಪಾರಾಯಣ, ಬಳಿಕ ಮಡೆ ಪ್ರದಕ್ಷಿಣೆ, ಮಧ್ಯಾಹ್ನ 12 ಗಂಟೆಗೆ ಕಲಸಾಭಿಷೇಕ, ಮಹಾಮಂಗಳಾರತಿ, ಸಂದರ್ಶನ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಯಲಿದೆ.

ನ.30ರಂದು ಬೆಳಿಗ್ಗೆ ಹಾಲಿಟ್ಟು ಸೇವೆ, ನಾಗಮಂಡಲೋತ್ಸವ ಕಟ್ಟುಕಟ್ಟಳೆ ಸೇವೆ, ತುಲಾಭಾರ, ಶ್ರೀ ಕ್ಷೇತ್ರ ಪ್ರದಕ್ಷಿಣೆ, ಶ್ರೀ ಕ್ಷೇತ್ರಪಾಲನಿಗೆ ಪೂಜೆ, ಶ್ರೀ ಭೂತರಾಯ ಸ್ವಾಮಿಗೆ ತೆಂಗಿನಕಾಯಿ ಸೇವೆ, ಸಂದರ್ಶನ, ರಾತ್ರಿ ಹಾಲಾಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Click Here

ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಬಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಹೂವುಗಳನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು ಮಾರುವ ಸಂಪ್ರದಾಯವಿದೆ. ಈ ಹರಕೆ, ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಷಷ್ಠಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಈ ಭಾಗದಲ್ಲಿದೆ.

ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಕೆರೆಯ ಸಮೀಪದಿಂದಲೇ ಸರದಿ ಆರಂಭವಾಗಿತ್ತು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂಡರು. ಬುಧವಾರ ಹಾಲಿಟ್ಟು ಸೇವೆ, ಮಂಡಲ ಸೇವೆ ಹಾಗೂ ತುಲಾಭಾರ ಸೇವೆ ಜರುಗಲಿದೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎಸ್.ಚಂದ್ರಶೇಖರ ಹೆಗ್ಡೆ, ಹಾಗೂ ಸಮಿತಿ ಸದಸ್ಯರು ಉಪಸ್ತಿಒತರಿದ್ದರು.

LEAVE A REPLY

Please enter your comment!
Please enter your name here