ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಸುಮಾರು 2700 ಕೋಟಿಗೂ ಮಿಕ್ಕಿ ಅನುದಾನ ಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಸರಕಾರದಿಂದ ಅತೀ ಹೆಚ್ಚು ಅನುದಾನ ಬಂದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಷೇತ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಮುಂದಿನ 6-7 ತಿಂಗಳೊಳಗೆ ಎಲ್ಲಾ ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗುವುದು. ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಾಗಿದ್ದು, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಸಂತೃಪ್ತಿ ಇದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಣ್ಗೆರೆ ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆ, ಕೊಡಂಚ ರಸ್ತೆ, ಮೇಲಂಡಿ ಯಕ್ಷಿ ದೇವಸ್ಥಾನಕ್ಕೆಹೋಗುವ ರಸ್ತೆ, ಬಂಟರ ಗರಡಿ ಹೋಗುವ ರಸ್ತೆಗೆ ಸುಮಾರು 120 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಕ್ರಮಕೈಗೊಳ್ಳಲಾಗಿದೆ. 94ಸಿ ಅಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಸರಕಾರ ಕ್ರಮಕೈಗೊಳ್ಳುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2 ಸಾವಿರ ಮನೆಗಳು ಮತ್ತು 40 ಶಾಲಾ ಕೊಠಡಿಗಳು ಮಂಜೂರಾಗಿದ್ದು ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಲು ಮತ್ತು ಶಾಲೆಗಳಿಗೆ ಕೊಠಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ, ಸದಸ್ಯರಾದ ಹರೀಶ ಮೇಸ್ತ, ಶೇಖರ ದೇವಾಡಿಗ, ಜನಾರ್ದನ ಪೂಜಾರಿ, ಶ್ರೀಧರ, ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ವಿನೋದ ಭಂಡಾರಿ, ಬಿಜೆಪಿ ಮುಖಂಡರಾದ ಉಮೇಶ ಮೇಸ್ತ, ದೇವದಾಸ ಖಾರ್ವಿ, ಸೋಮನಾಥ ಮೇಸ್ತ, ಸ್ಥಳೀಯರು, ಬಿಜೆಪಿ ಮುಖಂಡರು, ಗ್ರಾಪಂ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ತಾಪಂ ಮಾಜಿ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.