ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಸುಮಾರು 2700 ಕೋಟಿಗೂ ಮಿಕ್ಕಿ ಅನುದಾನ ಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಸರಕಾರದಿಂದ ಅತೀ ಹೆಚ್ಚು ಅನುದಾನ ಬಂದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಷೇತ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಮುಂದಿನ 6-7 ತಿಂಗಳೊಳಗೆ ಎಲ್ಲಾ ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗುವುದು. ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಾಗಿದ್ದು, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಸಂತೃಪ್ತಿ ಇದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಕೂರು ಕುಚ್ಚಟ್ಟು ಎಂಬಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ಕುಬ್ಜಾ ನದಿಗೆ ನದಿದಂಡೆ ಸಂರಕ್ಷಣಾ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರದಂದು ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಕ್ರಮಕೈಗೊಳ್ಳಲಾಗಿದೆ. 94ಸಿ ಅಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಸರಕಾರ ಕ್ರಮಕೈಗೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸುಕುಮಾರ್ ಶೆಟ್ಟಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪಿ.ಬಿ.ಅರ್.ಹೆಗ್ಡೆ, ದಿನೇಶ್ ಹೆಗ್ಡೆ, ಗೌತಮ್ ಶೆಟ್ಟಿ, ನಾರಾಯಣ್ ನಾಯ್ಕ್, ಶೇಖರ್ ಪೂಜಾರಿ ಗುಲ್ವಾಡಿ, ಕುಪ್ಪ ಸೌಕೂರು, ಗ್ರಾ.ಪಂ.ಸದಸ್ಯರಾದ ರಾಮಕೃಷ್ಣ ಹೆಬ್ಬಾರ್, ಮಂಜುಳಾ, ಸಂಜೀವಿ ಆಚಾರ್ತಿ, ಗುತ್ತಿಗೆದಾರರಾದ ಸುನೀತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಗುಲ್ವಾಡಿ ಗ್ರಾ.ಪಂ.ಸದಸ್ಯ ಸುರೇಂದ್ರ ಗುಲ್ವಾಡಿ ಸ್ವಾಗತಿಸಿ, ವಂದಿಸಿದರು.