ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಈ ಹಿಂದೆ ನೀಡಿದ ಬರವಸೆಯಂತೆ ಡಿಸೆಂಬರ 1 ಕ್ಕೆ ವಾರಾಹಿ ಕಾಲುವೆಗೆ ನೀರು ಹಾಯಿಸಬೇಕಾಗಿದ್ದು ,ಈ ತನಕ ನೀರು ಹಾಯಿಸಿಲ್ಲ . ನೀರು ಹಾಯಿಸುವ ದಿನಾಂಕದ ಬಗ್ಗೆ ರೈತರಿಗೆ ಮಾಹಿತಿ ನೀಡಿಲ್ಲ. ಕೂಡಲೇ ವಾರಾಹಿ ಕಾಲುವೆಗೆ ನೀರು ಹಾಯಿಸಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ.
ರೈತರ 2 ನೇ ಭತ್ತದ ಬೆಳೆಗೆ ಡಿಸೆಂಬರ್ ಮೊದಲ ವಾರದಲ್ಲಿ ನೀರಿನ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಡಿಸೆಂಬರ 1 ನೇ ತಾರೀಕಿಗೆ ನೀರು ಹಾಯಿಸುವುದೆಂದು ಸಚಿವರ ,ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ರೈತ ಸಂಘಕ್ಕೆ ಮತ್ತು ರೈತರಿಗೆ ಬರವಸೆ ನೀಡಿದ್ದರು. ಪ್ರತಿ ವರ್ಷ ಮುಗ್ದ ರೈತರು ಕಾಡಿ ಬೇಡಿ ನೀರು ಪಡೆಯುವ ಪರಿಸ್ಥಿತಿ ಎದುರಾಗಿರುವುದು ನೋವಿನ ಸಂಗತಿ .
ಪ್ರತಿ ವರ್ಷ ಮಳೆಗಾಲದಲ್ಲಿ ಕಾಲುವೆಗೆ ಹಾನಿಯಾಗುವುದು ಸಾಮಾನ್ಯ ವಿಚಾರ . ಇದನ್ನು ಸಕಾಲದಲ್ಲಿ ದುರಸ್ಥಿಪಡಿಸುವುದು ಇಲಾಖೆಯ ಜವಾಬ್ದಾರಿ .
ವಾರಾಹಿ ಎಡದಂಡೆ ನಾಲೆಯ ನೀರು ಸಿಗುವ ರೈತರು ವಾರಾಹಿ ನಾಲೆಯ ನೀರನ್ನು ನಂಬಿ ಸಾವಿರಾರು ಎಕ್ರೆ ಅಡಿಕೆ ತೋಟ ಮಾಡಿದ್ದಾರೆ. ನಾಲೆಯ ದುರಸ್ಥಿ ನೆಪದಲ್ಲಿ ನೀರು ಹಾಯಿಸದಿದ್ದಲ್ಲಿ ಅಡಿಕೆ ತೋಟಗಳಿಗೆ ಡಿಸೆಂಬರ ತಿಂಗಳಲ್ಲೇ ನೀರಿನ ಕೊರತೆಯಗಲಿದೆ.
ಯಾವುದೇ ಸುಳ್ಳು ಕಾರಣ ನೀಡದೆ ಕೂಡಲೇ ವಾರಾಹಿ ಕಾಲುವೆಗೆ ನೀರು ಹಾಯಿಸಬೇಕು ಮತ್ತು ನೀರು ಹಾಯಿಸುವ ದಿನಾಂಕದ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆಗ್ರಹಿಸಿದ್ದಾರೆ.