ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಕುಂದಾಪುರ ತಾಲೂಕಿನ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ಹಾಗೂ ಉಪ್ಪುಂದ ಜಾತ್ರೆ ಪ್ರಯುಕ್ತ ಹಬ್ಬದ ಎಂಟು ದಿನಗಳ ಮುಂಚೆ ಬಳೆಗಾರ ಜೋಗಿ ತಿರುಗಾಟ ನಾಡ ಗ್ರಾಮದಲ್ಲಿ ಸಂಪ್ರದಾಯ ಬದ್ಧವಾಗಿ ಶುಕ್ರವಾರ ನಡೆಯಿತು.
ಅನಾದಿಕಾಲದಿಂದಲೂ ಬಂದ ಕಟ್ಟುಕಳೆ ಇದಾಗಿದ್ದು ಒಮ್ಮೆ ಪಾರ್ವತಿಯಲ್ಲಿಗೆ ಬಳೆಗಾರನು ಬಳೆ ಇಡಲು ಹೋದಾಗ ಸಂತೋಷಗೊಂಡ ಪಾರ್ವತಿ ಬಳೆಗಾರನಿಗೆ ಹಣ ಹಾಗೂ ಚಿನ್ನವನ್ನು ನೀಡಿ ಸಂತೋಷ ಪಡಿಸುತ್ತಾಳೆ ಜೋಳಿಗೆಯಲ್ಲಿ ಹಣ ಹಾಗೂ ಚಿನ್ನಾವನ್ನು ತುಂಬಿಸಿ ದಾರಿಯಲ್ಲಿ ಬರುವಾಗ ಈಶ್ವರನು ಪ್ರತ್ಯಕ್ಷನಾಗಿ ಜೋಳಿಗೆಯಲ್ಲಿ ಏನಿದೆ ಎಂದು ಕೇಳುವಾಗ ಬಳೆಗಾರನು ಒಡೆದು ಹೋದ ಬಳೆ ಚೂರು ಇದೆ ಎಂದು ಹೇಳುತ್ತಾನೆ ಇದಕ್ಕೆ ಕೋಪಗೊಂಡ ಈಶ್ವರನು ನೀನು ಬಳೆ ಮಾರಿದ ಹಣದಿಂದ ನಿನ್ನ ಹೊಟ್ಟೆ ತುಂಬದೆ ಹೋಗಲಿ ಎಂದು ಹೇಳುತ್ತಾನೆ ನಂತರ ಬಳೆಗಾರನಿಗೆ ತನ್ನ ತಪ್ಪಿನ ಅರಿವಾಗಿ ಈಶ್ವರನಲ್ಲಿ ಹೋಗಿ ಬೇಡಿದಾಗ ಈಶ್ವರನು ತ್ರಿಶೂಲ, ಡಮರುಗವನ್ನು ಕೊಟ್ಟು ಕಾಲಭೈರವ ದೇವರನ್ನು ಹೊತ್ತು ಮನೆ ತಿರುಗಿ ಭಿಕ್ಷೆ ಬೇಡು ಎಂದು ಹೇಳುತ್ತಾನೆ ಎನ್ನುವ ಐತಿಹ್ಯವಿದೆ,ಅದರ ಪ್ರಕಾರವಾಗಿ ಪ್ರತಿವರ್ಷ ಉಪ್ಪುಂದ ಹಾಗೂ ಕೋಟೇಶ್ವರದ ಕೊಡಿ ಹಬ್ಬದ ಸಂದರ್ಭದಲ್ಲಿ ಸೇವಾ ರೂಪದಲ್ಲಿ ಮನೆ ಮನೆಗೆ ತಿರುಗಿ ಈಶ್ವರನ ಜಾತ್ರೆಗೆ ಹೇಳಿಕೆಯನ್ನು ನೀಡುವ ಸಂಪ್ರದಾಯ ಹಿಂದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.