ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶದ ಮೊದಲ ರಾಷ್ಟ್ರಪತಿ, ವಕೀಲರಾಗಿದ್ದ ಡಾ| ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನವನ್ನು ದೇಶದಾದ್ಯಂತ ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅವರ ತತ್ವಾದರ್ಶಗಳನ್ನು ನಾವು ಪಾಲಿಸಬೇಕು. ವಕೀಲ ವೃತ್ತಿ ಶ್ರೇಷ್ಠ ಸೇವೆಯಾಗಿದ್ದು, ಕಾನೂನು ತಿಳಿದವರಾಗಿದ್ದು, ಸಮಾಜ ದಾರಿ ತಪ್ಪದಂತೆ, ನೊಂದವರಿಗೆ ನ್ಯಾಯ ಒದಗಿಸುವ ಮಹತ್ತರ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಹೇಳಿದರು.
ಅವರು ಶನಿವಾರ ಕುಂದಾಪುರದ ಬಾರ್ ಅಸೋಸಿಯೇಶನ್ ವತಿಯಿಂದ ಕುಂದಾಪುರದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದರು.
ಈ ದಿನ ವಕೀಲರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾವು ನಮ್ಮ ವೃತ್ತಿಯೊಂದಿಗೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ. ಏನು ಸಹಾಯ ಮಾಡಿದ್ದೇವೆ ಅನ್ನುವುದನ್ನು ನೋಡಬೇಕು. ನೊಂದವರಿಗೆ, ಸಂತ್ರಸ್ತರಿಗೆ, ಬಡ ವರ್ಗದ ಜನರಿಗೆ ನ್ಯಾಯ ಸಿಗುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದ ಅವರು, ಕಿರಿಯ ವಕೀಲರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಂಘದಿಂದ ನಿರಂತರವಾಗಿ ಕಾನೂನು ಕಾರ್ಯಾಗಾರ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್., ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಪೃಥ್ವಿರಾಜ್ ಕೆ. ಮಾತನಾಡಿದರು.
ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಧನೇಶ್ ಮುಗಳಿ, ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ರೋಹಿಣಿ ಡಿ., ಎರಡನೇ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶೆ ವಿದ್ಯಾ ಎ.ಎಸ್., ಬಾರ್ ಅಸೋಸಿಯೇಶನ್ ಪ್ರ. ಕಾರ್‍ಯದರ್ಶಿ ಜೆ. ಶ್ರೀನಾಥ್ ರಾವ್, ಪದಾಧಿಕಾರಿಗಳು, ವಕೀಲರು ಉಪಸ್ಥಿತರಿದ್ದರು.
ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ, ರಾಘವೇಂದ್ರ ಚರಣ್ ನಾವಡ ಕಾರ್‍ಯಕ್ರಮ ನಿರೂಪಿಸಿದರು.