ಕುಂದಾಪುರ ಮಿರರ್ ಸುದ್ದಿ…
Video:
ಕುಂದಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಲು ಸಿದ್ಧತೆ ನಡೆಸಿದೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಮಂಗಳವಾರ ವಿವಿಧ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಬೀಜಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಭೆಯು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ತೆಕ್ಕಟ್ಟೆಯಲ್ಲಿ ನಡೆಯಿತು. ಕೋಟೆಶ್ವರ ಜಿಲ್ಲಾ ಪಂಚಾಯತ್ ಮತ್ತು ಕುಂದಾಪುರ ಪುರಸಭಾ ವ್ಯಾಪ್ತಿಯ ಸಭೆಯು ಆರ್.ಎನ್. ಶೆಟ್ಟಿ ಮಿನಿಹಾಲ್ ಕುಂದಾಪುರದಲ್ಲಿ, ಹಾಲಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಭೆಯು ಜನ್ನಾಡಿಯ ಫೇವರೆಟ್ ಹಾಲ್ ನಲ್ಲಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಭೆಯು ಕಾಂಗ್ರೆಸ್ ಪಕ್ಷದ ಕಚೇರಿ ಇಂದಿರಾ ಸಭಾಭವನದಲ್ಲಿ ನಡೆಯಿತು.
ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ನಾಲ್ಕು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಯಾರನ್ನೇ ಪಕ್ಷ ಆಯ್ಕೆ ಮಾಡಿದರೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಂದರ್ ಹೇಳಿದರು.