ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಮದಾಗುವ ಅಡಿಕೆ ಮೇಲೆ ಹೆಚ್ಚಿನ ಸುಂಕ ವಿಧಿಸಬೇಕು ಮತ್ತು ಎಲೆಚುಕ್ಕೆ ರೋಗಕ್ಕೆ ಶೀಘ್ರವೇ ಔಷಧಿ ಕಂಡುಹಿಡಿಯಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
ಲೋಕಸಭಾ ಅಧಿವೇಶನದಲ್ಲಿ ಇಂದು ಶೂನ್ಯ ವೇಳೆಯಲ್ಲಿ ಅಡಿಕೆ ರೈತರ ಸಮಸ್ಯೆಗಳ ಕುರಿತು ಮಹತ್ವದ ವಿಷಯವನ್ನು ಪ್ರಸ್ತಾಪಿಸಿ, ಸದನದ ಗಮನ ಸೆಳೆದರು.
ಕರ್ನಾಟಕವೂ ಸೇರಿದಂತೆ ದೇಶದ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಕರ್ನಾಟಕದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ಸೇರಿದಂತೆ 16 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ, ಕರ್ನಾಟಕದಲ್ಲಿ ಸುಮಾರು 10 ಲಕ್ಷ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿವೆ.
ದೇಶದ ಒಟ್ಟು ಉತ್ಪಾದನೆಯಾದ 16 ಲಕ್ಷದ 50 ಸಾವಿರ ಮೆಟ್ರಿಕ್ ಟನ್‌ಗಳಲ್ಲಿ ಕರ್ನಾಟಕ ರಾಜ್ಯವು ಸುಮಾರು 69% ಅಡಿಕೆಯನ್ನು ಉತ್ಪಾದಿಸುತ್ತದೆ, ಇದರ ಒಟ್ಟು ಮೌಲ್ಯ ಸುಮಾರು 8 ಸಾವಿರದ 250 ಕೋಟಿ, ಇದು ಜಿಎಸ್‌ಟಿ ಮತ್ತು ವಿವಿಧ ಉತ್ಪನ್ನಗಳ ಮೇಲೆ ಸೆಸ್ ರೂಪದಲ್ಲಿ ಬೊಕ್ಕಸಕ್ಕೆ 24 ಸಾವಿರ 750 ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ನೀಡುತ್ತಿದೆ.
ಬೆಳೆಗಾರರು ನಿಜವಾಗಿಯೂ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಅಡಿಕೆ ಬೆಳೆಗಾರರು ಎಲೆ ಚುಕ್ಕೆ ರೋಗದಿಂದ ತತ್ತರಿಸುತ್ತಿದ್ದಾರೆ. ಹಾಗಾಗಿ ಇಳುವರಿಯಲ್ಲಿ ಭಾರಿ ಕುಸಿತ ಉಂಟಾಗಿ ಶೇ,40ರಿಂದ 50ಕ್ಕಿಂತ ಕಡಿಮೆಯಾಗಿದೆ, ಬೆಲೆ ಕುಸಿತದಿಂದ ಬೆಳೆಗಾರರಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ರೈತರು ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಈ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ 58,000 ರೂ. ಇದ್ದುದ್ದು ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರಕ್ಕೆ ಇಳಿದಿದೆ. ಇದಲ್ಲದೆ ಎಲೆ ಚುಕ್ಕೆ ರೋಗದಿಂದ ಅಡಿಕೆ ಇಳುವರಿ ಕುಸಿತದ ಜತೆಗೆ ಬೆಲೆ ಕುಸಿದಿರುವುದು ಆತಂಕ ಹಾಗೂ ಮನದಾಳದಲ್ಲಿ ಆನಂಕ ಮೂಡಿಸಿದೆ.
ಆದುದರಿಂದ ಆಮದು ಮಾಡಿಕೊಳ್ಳುವ ಅಡಿಕೆಗೆ ಹೆಚ್ಚಿನ ಆಮದು ಸುಂಕ ವಿಧಿಸಿ, ರೋಗಗಳಿಗೆ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಔಷಧವನ್ನು ಪರಿಚಯಿಸಿ, ಕರ್ನಾಟಕದ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಹಾಗೂ ಅಕ್ರಮ ಅಡಿಕೆ ವ್ಯಾಪಾರವನ್ನು ತಡೆಯಲು ಕಟ್ಟುನಿಟ್ಟಿನ ಕಾರ್ಯವಿಧಾನವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.