ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದುರಾಸೆ ಎಂಬ ಭಾವಚಿಂತನೆ ನಾಗರಿಕ ಸಮಾಜವನ್ನು ಹದಗೆಡಿಸುತ್ತಿದೆ. ದುರಾಸೆ ದೂರೀಕರಿಸಲು ಏಳೆಯ ಮಕ್ಕಳಲ್ಲಿ ತೃಪ್ತಿ ಮತ್ತು ಮಾನವೀಯತೆ ಗುಣ ಬೆಳೆಸಬೇಕು ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ನುಡಿದರು.
Video :
ಶನಿವಾರ ಜರುಗಿದ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 116ನೇ ವಾರ್ಷಿಕೋತ್ಸವ ವಿಕಾಸ-2022 ಸಮಾರಂಭದಲ್ಲಿ ಅವರು ದಿಕ್ಸೂಚಿ ನುಡಿಗಳನ್ನಾಡಿದರು.
ಶ್ರೀಮಂತಿಕೆ ಗೌರವಿಸುವ ಸಮಾಜದಲ್ಲಿ ನಾವಿದ್ದೇವೆ. ಆತ ಯಾವ ರೀತಿ ಶ್ರೀಮಂತನಾದ ಎಂಬ ಬಗ್ಗೆ ಯೋಚಿಸುವುದಿಲ್ಲ. ನಾವೆಲ್ಲಾ ಚಿಕ್ಕವರಿದ್ದಾಗ ಜೈಲಿಗೆ ಹೋದವನ ಮನೆ ಹತ್ತಿರ ಸುಳಿಯುತ್ತಿರಲಿಲ್ಲ. ಈಗ ಜೈಲಿಗೆ ಹೋಗಿ ಬಂದವರಿಗೆ ಅದ್ದೂರಿಗೆ ಸ್ವಾಗತ ನೀಡುವ ಪ್ರವೃತ್ತಿ ಬೆಳೆಯುತ್ತಿದೆ. ನಮ್ಮ ಮಕ್ಕಳಿಗೆ ಯಾವ ಸಂದೇಶ ನೀಡುತ್ತದೆ ಎಂಬ ಬಗ್ಗೆ ಯೋಚಿಸಿ. ದೇಶ ಅಭಿವೃದ್ಧಿ ಆಗಿದೆ. ಎಲ್ಲದಕ್ಕಿಂತಲೂ ಹೆಚ್ಚು ಅಭಿವೃದ್ಧಿಯಾಗಿರುವುದು ದುರಾಸೆ. ಈ ರೋಗಕ್ಕೆ ಮದ್ದಿಲ್ಲ. ದುರಾಸೆಗೆ ಒಳಪಟ್ಟ ವ್ಯಕ್ತಿ ಕಾನೂನಿಗೆ ಹೆದರಲ್ಲ. ನಮ್ಮ ದೇಶದಲ್ಲಿ ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಲು 30-40 ವರ್ಷ ಬೇಕು. ಗಂಡ ಹೆಂಡತಿ ಜಗಳ ಮಾಡಿ ಡಿವೋರ್ಸ್‍ಗೆ ಹೋದರೆ ತೀರ್ಪು ಬರುವಾಗ ಅವರು ಮುದುಕರಾಗಿರುತ್ತಾರೆ. ನಮ್ಮ ಸಂವಿಧಾನದ ಮೂರು ಸ್ತಂಭಗಳು ಕುಸಿತ ಆಗುತ್ತಿದೆ. ಇದಕ್ಕೆ ಸಮಾಜದಲ್ಲಿನ ದುರಾಸೆ ಎಂಬ ಗುಣವೇ ಕಾರಣ. ಅಣುಬಾಂಬ್ ಹೇಗೆ ತಯಾರಿಸಲಾಗುತ್ತದೆ ಎಂದು ಹೇಳಿಕೊಡುವ ವಿದ್ಯೆ ಇದೆ. ಹೇಗೆ ಬಳಸಬೇಕೆಂದು ಹೇಳಿಕೊಡಲಾಗುವುದಿಲ್ಲ. ಈಗಿನ ಶಿಕ್ಷಣ ಪದ್ಧತಿ ಎತ್ತರದಲ್ಲಿದೆ. ಆದರೆ ನೀತಿಪಾಠ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ರೂವಾರಿಗಳಾಗಬೇಕು ಎಂದು ಅವರು ನುಡಿದರು.
ಮುಖ್ಯ ಅತಿಥಿ ಕರಾವಳಿ ಕಾವಲು ಪಡೆ ಎಸ್ಪಿ ಅಬ್ದುಲ್ ಅಹಾದ್ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಕರಾವಳಿ ಅಭಿಯಾನ ಇಲಾಖೆ ಹಮ್ಮಿಕೊಂಡಿದ್ದು ಈಗಾಗಲೆ ಈ ಅಭಿಯಾನ ಹಮ್ಮಿಕೊಂಡಿರುವ ಬ್ಯಾರೀಸ್ ವಿದ್ಯಾಸಂಸ್ಥೆ ನಮ್ಮ ಜತೆ ಕೈಜೋಡಿಸಬೇಕು ಎಂದರು.
ಈ ಸಂದರ್ಭ ನಾಡೋಜ ಕೆ.ಪಿ.ರಾವ್ ಹಾಗೂ ಭಾರತ ವಿಶೇಷಚೇತನ ಕ್ರಿಕೆಟ್ ತಂಡದ ಸದಸ್ಯ ಪ್ರಥ್ವಿರಾಜ್ ಶೆಟ್ಟಿ ಹುಂಚನಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿಯ ಸದಸ್ಯ ಅಬುಶೇಕ್ ಸಾಹೇಬ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಬ್ಯಾರೀಸ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಡಾ.ಶಮೀರ್, ಬ್ಯಾರೀಸ್ ಬಿಎಡ್ ಕಾಲೇಜು ಪ್ರಿನ್ಸಿಪಾಲ್ ಸಿದ್ಧಪ್ಪ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಜಟ್ಟಪ್ಪ, ಸುಮಿತ್ರಾ, ಫಾತಿಮಾ ಉಪಸ್ಥಿತರಿದ್ದರು.
ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಪ್ರಿನ್ಸಿಪಾಲ್ ಆಶ್ವಿನಿ ಶೆಟ್ಟಿ ಸ್ವಾಗತಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮಹಮ್ಮದ್ ಬ್ಯಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕ ಜಯಶೀಲ ಶೆಟ್ಟಿ, ಡಾ.ಫಿರ್ದೋಸ್ ಮತ್ತು ವಿನುತಾ ವರದಿ ವಾಚಿಸಿದರು. ಹಯವದನ ಉಪಾಧ್ಯಾಯ ಮತ್ತು ಸಂದೀಪ್‍ಕುಮಾರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.