Video:
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸೇವೆಗೆ ಇನ್ನೊಂದು ಹೆಸರು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ, ಕೃಷಿಕರಿಗೆ ಮತ್ತು ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಕಳೆದ 20 ವರ್ಷಗಳ ಹಿಂದೆ ಆರಂಭಗೊಂಡ ಮುದೂರು ಸಹಕಾರಿ ಸಂಸ್ಥೆಯು ಕೇವಲ ಲಾಭದ ದೃಷ್ಠಿಗಿಂತ ಮುಖ್ಯವಾಗಿ ಸಹಕಾರಿ ತತ್ವಗಳನ್ನು ಅಳವಡಿಸಿಕೊಂಡು ಸೇವೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಜನರ ಸ್ವಾವಲಂಬಿ ಬದುಕಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಹೇಳಿದರು.
ಭಾನುವಾರ ಮುದೂರು ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಸ್ಥಳಾಂತರಿಸಿದ ಪ್ರಧಾನ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರ ಆರಂಭಗೊಂಡು 120 ವರ್ಷವಾಗಿದ್ದು ಹಂತಹಂತವಾಗಿ ಬೆಳೆದು ಹೆಮ್ಮರವಾಗಿದೆ. ಸಹಕಾರಿ ರಂಗ ಜನರ ಬಳಿಗೆ ಹೋಗಿ ಕೆಲಸ ಮಾಡುತ್ತಿರುವ ಕಾರಣಕ್ಕೆ ಈ ಸಂಸ್ಥೆಗಳು ಜನರೇ ನಡೆಸುವ ಸಂಘಗಳಾಗಿದೆ. ಇಲ್ಲಿ ಸಿಗುವ ಸೌಲಭ್ಯಗಳು, ಪ್ರಯೋಜನಗಳು ಯಾವುದೇ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಿಗುವುದಿಲ್ಲ ಎಂದ ಅವರು, ಈ ನೆಲೆಯಲ್ಲಿ ತಮ್ಮ ಗ್ರಾಹಕರ ಅಭಿವೃದ್ಧಿಯೇ ಧ್ಯೇಯವಾಗಿಟ್ಟಕೊಂಡು ಸೇವೆಯೇ ಮುಖ್ಯ ಧರ್ಮವನ್ನಾಗಿಸಿ ಯಾವುದೇ ಜಾತೀಯತೆ ಇಲ್ಲದೆ ಅಭಿವೃದ್ಧಿ ಹಾಗೂ ಮಹಿಳಾ ಸ್ವಾವಲಂಬನೆಗಾಗಿ ಸಂಘದ ಮೂಲಕ ಸಹಾಯ, ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ರಸಗೊಬ್ಬರ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಸಹಕಾರಿ ಧುರೀಣ ಮೊಳಹಳ್ಳಿ ಶಿವರಾಯರ ನಂತರ ಅದೇ ದಾರಿಯಲ್ಲಿ ರಾಜೇಂದ್ರಕುಮಾರ್ ಅವರು ತಮ್ಮ ಯೋಚನೆ ಮತ್ತು ಯೋಜನೆ ಮೂಲಕ ಅವಿಭಜಿತ ದಕ ಜಿಲ್ಲೆಯ ಎಲ್ಲಾ ಸಹಕಾರಿ ಕ್ಷೇತ್ರವನ್ನು ಉನ್ನತೀಕರಿಸುತ್ತಿದ್ದಾರೆ. ಪ್ರತಿ ಹಳ್ಳಿ- ಹಳ್ಳಿಗಳಲ್ಲಿ ಸಹಕಾರಿ ಸಂಘ ಆರಂಭವಾಗಬೇಕು. ಗ್ರಾಮಕ್ಕೊಂದು ಸಹಕಾರಿ ಸಂಘ ಆರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಸಂಘದ ಅಧ್ಯಕ್ಷ ಎಂ. ವಿಜಯ ಶಾಸ್ತ್ರಿ ಅಧ್ಯಕ್ಷತೆವಹಿಸಿದ್ದರು. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸಂಸ್ಥೆಯು ಪ್ರಾಯೋಗಿಕವಾಗಿ ಸಂಘದ ವ್ಯಾಪ್ತಿಯಲ್ಲಿ ಮರಣ ಹೊಂದಿದವರನ್ನು ದಹಿಸಲು ಆಧುನಿಕ ಮಾದರಿಯ ಯಂತ್ರವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು. ಎಂ. ಎನ್. ರಾಜೇಂದ್ರಕುಮಾರ್, ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುಧಾಕರ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಟಿ. ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಜಿ.ಕೇ.ಸ.ಬ್ಯಾಂಕ್‍ನ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ ಮಹೇಶ ಹೆಗ್ಡೆ, ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಸಂಘದ ಉಪಾಧ್ಯಕ್ಷ ನಕ್ಷತ್ರ ಭೋವಿ, ಸರ್ವ ನಿರ್ದೇಶಕರು, ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಸ್ವಾಗತಿಸಿ, ಮಂಜುನಾಥ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.