ಕುಂದಾಪುರ ಮಿರರ್ ಸುದ್ದಿ…
Video:
ಬೈಂದೂರು : ಇತಿಹಾಸ ಪ್ರಸಿದ್ಧ ಗಂಗನಾಡು ಒಣಕೊಡ್ಲು ಕರಂಟಿ ಕುಟುಂಬಸ್ಥರು ಮತ್ತು ಮರಾಠಿ ಸಮುದಾಯ ಹಾಗೂ ಊರಿನವರು ನಡೆಸಿಕೊಂಡು ಬರುತ್ತಿರುವ 110ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ ಇವರ ಸಾರಥ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಡಿ.18ರಂದು ಆರಂಭಗೊಂಡಿತು.
ಮೂರು ದಿನಗಳ ಪರ್ಯಂತ ನಡೆಯುವ ಈ ಕಂಬಳೋತ್ಸವ ಉದ್ಘಾಟಿಸಿದ ಬೈಂದೂರು ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ ಮಾತನಾಡಿ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ನಡೆಯುತ್ತಿರುವ ಈ ಕಂಬಳೋತ್ಸವ ವಿಶಿಷ್ಟವಾಗಿದೆ. ರೈತಾಪಿಗಳ ಸಂಭ್ರಮದ ಆಚರಣೆಯಾಗಿ ಧಾರ್ಮಿಕ ನಂಬಿಕೆಯಿಂದ ಕಂಬಳ ನಡೆದುಕೊಂಡು ಬರುತ್ತಿದೆ. ಇಲ್ಲಿನ ಸಾಂಪ್ರಾದಾಯಿಕವಾದ ಕಂಬಳವನ್ನು ವಿಶಿಷ್ಠ ರೀತಿಯಲ್ಲಿ ಆಯೋಜನೆ ಮಾಡಿದ ದೀಪಕ್ ಕುಮಾರ್ ಶೆಟ್ಟಿ ಅಭಿನಂದನಾರ್ಹರು ಎಂದರು.
ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಈ ಭಾಗದ ಎಲ್ಲ ಗ್ರಾಮಗಳ ಮರಾಠಿ ಸಮುದಾಯದವರು ಈ ಕಂಬಳೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಗಂಗನಾಡುವಿನ ಪರಂಪರಿಕ ಕಂಬಳ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಳವೂ ಪ್ರಸಿದ್ಧವಾಗಿದ್ದು, ದೇವಳ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೂರು ದಿನಗಳ ಪರ್ಯಂತ ಕಂಬಳೋತ್ಸವ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಅಧ್ಯಕ್ಷರಾದ ಕುಯ್ಲಾಡಿ ಸುರೇಶ್ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸುರೇಶ್ ಬಟವಾಡಿ,
ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಸರ್ಕಲೆ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರು ಪಿಎಸ್‍ಐ ನಿರಂಜನ್ ಗೌಡ ಕುಪ್ಪಯ್ಯ ಮರಾಠಿ, ರಾಜು ಮರಾಠಿ, ಗಿರೀಶ್ ಬೈಂದೂರು, ಒಣಕೋಡ್ಲು ಕರಂಟಿ ಕುಟುಂಬಸ್ಥರು ಮತ್ತು ಮರಾಠಿ ಸಮುದಾಯದವರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರದೀಪ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ವೀಕ್ಷಕರ ವಿವರಣೆಗರಾಗಿ ಗಣೇಶ್ ಕೊಠಾರಿ, ಕಿಶೋರ್ ಬೈಂದೂರು ಸಹಕರಿಸಿದರು.
ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ, ಕಬ್ಬು ಹಾಗೆ ಕೋಣಗಳ ಮಾಲೀಕರಿಗೆ ಶಾಲು ಓದಿಸಿ ಗೌರವದಿಂದ ಬರಮಾಡಿಕೊಂಡರು. ಗಂಗನಾಡು ಒಣಕೊಡ್ಲು ಕರಂಟಿ ಕುಟುಂಬಸ್ಥರ ಮನೆಯವರ ಕೋಣವನ್ನು ಸಿಂಗರಿಸಿಕೊಂಡು ದೈವ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಮೂಲಕ ಕಂಬಳ ಗದ್ದೆಗೆ ತರುವುದರ ಮುಖೇನ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಯಿತು, ಪ್ರತಿಯೊಂದು ಕೋಣದ ಮಾಲೀಕರು ತಮ್ಮ ಕೋಣವನ್ನು ಸಿಂಗರಿಸಿ ಕೋಣಗಳ ತಲೆಗೆ ಸಿಂಗಾರು ಕೊನೆಯನ್ನು ಕಟ್ಟಿ ವಾದ್ಯದ ಮೂಲಕ ದೇವರ ಹೆಸರನ್ನು ಹೊಳಲು ಕೂಗುತ್ತಾ ಕಂಬಳ ಗದ್ದೆಗೆ ಇಳಿಸಿ ನಂತರ ಕಂಬಳ ಗದ್ದೆಯ ನೀರನ್ನು ಕೋಣಗಳಿಗೆ ಸಿಂಪಡಿಸಿ ಸ್ವಲ್ಪ ನೀರನ್ನು ಕೋಣಗಳಿಗೆ ಕುಡಿಸಿ ತಮ್ಮ ಕೋಣವನ್ನು ಓಡಿಸಿ ಕೃತಾರ್ಥರಾದರು. ಈ ಬಾರಿ ಸೆನ್ಸಾರ್ ಮೂಲಕ ಕೋಣದ ಓಟದ ವೇಗಮಿತಿಯನ್ನು ಅಳೆಯುವ ಸಾಧನ ಅಳವಡಿಸಲಾಯಿತು.