ಬ್ರಹ್ಮಶ್ರೀ ನಾರಾಯಣ ಗುರುಗಳ 167 ನೇ ಜನ್ಮ ಜಯಂತಿಯ ಪ್ರಯುಕ್ತ ಕುಂದಾಪುರದಲ್ಲಿ ಬೃಹತ್ ವಾಹನ‌ ಜಾಥಾ

0
735

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀ ನಾರಾಯಣಗುರು ಯುವಕ ಮಂಡಲ ಕುಂದಾಪುರ ಇವರಿಂದ 167ನೇ ಗುರು ಜಯಂತಿ‌ ಪ್ರಯುಕ್ತ ಕುಂದಾಪುರದಲ್ಲಿ ಬೃಹತ್ ವಾಹನ‌ ಜಾಥಾ ಭಾನುವಾರದಂದು ನಡೆಯಿತು. ಕುಂದಾಪುರದ ನಾರಾಯಣಗುರು ಕಲ್ಯಾಣಮಂಟಪದ ಎದುರು ಮಾಜಿ ಪುರಸಭಾ ಸದಸ್ಯ ಕಾಳಪ್ಪ ಪೂಜಾರಿ ಜಾಥಾಕ್ಕೆ ಚಾಲನೆ ನೀಡಿದ್ದು ಕುಂದಾಪುರ ಶಾಸ್ತ್ರೀ ವೃತ್ತ, ಚರ್ಚ್ ರಸ್ತೆ ಮೂಲಕವಾಗಿ ಸಾಗಿದ ಜಾಥಾ ಕೋಡಿ ಶ್ರೀ ಚಕ್ರೇಶ್ವರೀ‌ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

Click Here

Click Here


ದೇವಸ್ಥಾನದ ಪ್ರಾಂಗಣದಲ್ಲಿ‌ ನಾರಾಯಣಗುರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಶ್ರೀ ನಾರಾಯಣ ಗುರುಗಳು ಹೇಳಿದಂತೆ ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಬೇಕಿದೆ. ಹಳ್ಳಿಹಳ್ಳಿಗಳಲ್ಲೂ ಕೂಡ ನಾವು ವಿದ್ಯೆಯಲ್ಲಿ ಮುಂದಿದ್ದರೂ ಕೂಡ ಆದರೆ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಮಾಜಿಕ ಉದ್ದೇಶದಿಂದ ನಾವು ಸಂಘಟನಾತ್ಮಕವಾಗಿ ಸಮನ್ವಯ ಕೊರತೆಯಲ್ಲಿದ್ದೇವೆ. ತುಂಬಾ ಹಿಂದೆ ಆರು ಜನರು ಮಂದಿ ಸಂಸದರು ಬಿಲ್ಲವ ಸಮಾಜದಲ್ಲಿದ್ದು ಈಗಿಲ್ಲ. ಬೆರಳೆಣಿಕೆಯಷ್ಟು ಮಾತ್ರವೇ ಶಾಸಕರಿದ್ದು ಸಂಘಟನೆ ಬಲ ಕಳೆದುಕೊಂಡಿರುವುದು ಇದಕ್ಕೆ ಕಾರಣ. ಯುವ ಮುಖಂಡರು ಸಮಾಜ ಸಂಘಟಿಸುವಲ್ಲಿ ಗುರುಗಳು ಹಾಕಿಕೊಟ್ಟ ಮಾರ್ಗದರ್ಶನದಂತೆ ಮುನ್ನಡೆಯಬೇಕು. ಸಮುದಾಯದ ಸಂಘಟನೆ ಕೇವಲ ಸಾಮಾಜಿಕ ಜಾಲತಾಣಗಳಿಂದ ಇದು ಸಾಧ್ಯವಿಲ್ಲ ಬದಲಾಗಿ ರಾಜಕೀಯ ಶಕ್ತಿಯ ಅಗತ್ಯವಿದೆ. ರಾಜಕೀಯ ಮುಖಂಡರುಗಳು ಕೂಡ ಸಮುದಾಯದ ಜನರ ಪರವಾಗಿ ನಿಲ್ಲಬೇಕು. ಅಧಿಕಾರದಲ್ಲಿದ್ದಾಗ ಸಮುದಾಯದ ನಾಯಕರು ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕಾರ್ಯವಾಗಬೇಕು ಎಂದರು.

ಬಿಲ್ಲವ ಯುವ ಮುಖಂಡ ಮಹೇಶ್ ಪೂಜಾರಿ ಹಳೆಅಳಿವೆ ಮಾತನಾಡಿ, ಸುಮಾರು ೧೫೦ ವರ್ಷಗಳ ಹಿಂದೆ ಕೇರಳದಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು ಮೇಳುಕೀಳು ಭಾವನೆಗಳನ್ನು ಹಿಮ್ಮೆಟ್ಟಿಸಿ ಎಲ್ಲರೂ ಒಂದೇ ಎನ್ನುವ ಸಮಾಜಿಕ ನ್ಯಾಯಕ್ಕೆ ಅಡಿಪಾಯ ಹಾಕಿದವರು. ಶೋಷಣೆಯಿಂದ ನಡೆಯುತ್ತಿದ್ದ ಮತಾಂತರ ತಡೆಯಲು ಇದು ಸಹಾಯಕವಾಯಿತು. ಕೆಳವರ್ಗಕ್ಕೂ ದೇವರ ಪೂಜೆ ಮಾಡುವ ಅವಕಾಶವಿದೆ ಎನ್ನಲು ಕುದ್ರೋಳಿ ದೇವಸ್ಥಾನದ ಮೂಲಕ ಹೊಸ ಬುನಾದಿ ಹಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಬಿಲ್ಲವ ಸಮಾಜ ಸದೃಢ ಹಾಗೂ ಬಲಿಷ್ಟವಾಗಿದೆ ಎಂದರು.

ಈ ಸಂದರ್ಭ ಕುಂದಾಪುರ ಶ್ರೀ ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಶ್ರೀನಾಥ್ ಕಡ್ಗಿಮನೆ, ಕಾರ್ಯಕ್ರಮ ಸಂಯೋಜಿಸಿದ ಬಿಲ್ಲವ ಹಿರಿಯ ಮುಖಂಡ ಶಂಕರ್ ಪೂಜಾರಿ ಕೋಡಿ, ಕೋಡಿ ಶ್ರೀ ಚಕ್ರೇಶ್ವರೀ‌ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲ ಪೂಜಾರಿ, ಬೈಂದೂರು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಕೋಡಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪೂಜಾರಿ ಹಾಗೂ ಬಿಲ್ಲವ ಸಮಾಜದವರಿದ್ದರು.

ಬಿಲ್ಲವ ಸಂಘದ ಭಾಸ್ಕರ್ ವಿಠಲವಾಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here